IND vs PAK: ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡಿಯಾಗುತ್ತಾ?; ಇಲ್ಲಿದೆ ದುಬೈ ಹವಾಮಾನ ವರದಿ
IND vs PAK Champions Trophy 2025: ಇಂದು (ಫೆಬ್ರವರಿ 23) ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿಯಾಗಲಿವೆ. ಈ ಕ್ರಿಕೆಟ್ ಪಂದ್ಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಹಾಗಾದರೆ ಇಂದು ದುಬೈ ಹವಾಮಾನ ವರದಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗ್ರೂಪ್ ಎ ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಕಳೆದ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದ್ದು, ಇದೀಗ ಇಂದು ಪಾಕ್ ವಿರುದ್ಧ ಆರ್ಭಟಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಸುಣ್ಣವಾಗಿದ ಪಾಕಿಸ್ತಾನಕ್ಕೆ ಇಂದು ಗೆಲುವು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಪಾಕ್ ಟೂರ್ನಿಯಿಂದ ಹೊರಬೀಳುವುದು ಖಚಿತ.
ಈಗಾಗಲೇ ಭಾರತವು ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ಇಂದು ಉತ್ತಮ ಲಯದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲ ಕ್ರಮಾಂಕದಲ್ಲಿ ಬಂದ ನಾಯಕ ರೋಹಿತ್ ಶರ್ಮಾ 36 ಬಾಲ್‌ಗಳಲ್ಲಿ 7 ಸಿಕ್ಸರ್ ಸಹಿತ 41 ರನ್ ಸಿಡಿಸಿದರು. ಇನ್ನು ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್‌ಗೆ ಇಳಿದ ಶುಭ್‌ಮನ್ ಗಿಲ್ ಉತ್ತಮ ಬ್ಯಾಟ್ ಬೀಸುವ ಮೂಲಕ 129 ಬಾಲ್‌ಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಬರೋಬ್ಬರಿ 101 ರನ್‌ಗಳನ್ನು ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಮತ್ತೊಂಡೆ ಭಾರತದ ಪರ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಮಾಡಿ 5 ದುಬಾರಿ ವಿಕೆಟ್ ತೆಗೆದರು. ಈ ಮೂಲಕ ಶಮಿ ಕೂಡ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನು ಹರ್ಷಿತ್ ರಾಣ 3, ಅಕ್ಸರ್ ಪಾಟೆಲ್ 2 ವಿಕೆಟ್ ಕಬಳಿಸಿದರು. ಈ ಮೂಲಕ ಬಾಂಗ್ಲಾವನ್ನು 49.4 ಓವರ್‌ಗಳಿಗೆ ಆಲ್ ಔಟ್ ಮಾಡಿ 228 ರನ್‌ಗಳಿಗೆ ಕಟ್ಟಿ ಹಾಕಿದರು. ಭಾರತವು ಈ ಗುರಿಯನ್ನು 46.3 ಓವರ್‌ಗಳಿಗೆ ತಲುಪಿಬಿಟ್ಟಿತು.
ಒತ್ತಡದಲ್ಲಿರುವ ಪಾಕಿಸ್ತಾನ: ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಎಡವಿದೆ. ಇಂದು ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಅವರು ಮತ್ತಷ್ಟು ಆಕ್ರಮಣಕಾರಿ ಬೌಲಿಂಗ್ ಮಾಡಬೇಕಿದೆ. ಅಲ್ಲದೆ, ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯಲ್ಲಿ 90 ಎಸೆತಗಳಲ್ಲಿ 64 ರನ್ ಗಳಿಸಿದ ಬಾಬರ್ ಅಜಮ್ ಕೂಡ ಆಕ್ರಮಣಕಾರಿ ಆಟ ಆಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆ ಮುನ್ಸೂಚನೆ: ಇನ್ನು ಇಂದು ದುಬೈನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಯಾವುದೇ ಮಳೆ ಆತಂಕವಿಲ್ಲ. ಮಳೆಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹವಾಮಾನ ಇಲಾಖೆಯಿಂದ ತಿಳಿದುಬಂದಿದೆ. ಆದ್ದರಿಂದ ಪಂದ್ಯಕ್ಕೆ ಯಾವುದೇ ಮಳೆಯ ಅಡೆತಡೆ ಇಲ್ಲ ಎಂದು ಹೇಳಬಹದು.
ಆದರೆ, ದುಬೈನಲ್ಲಿ ಇಂದು ತಪಾಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹಗಲಿನ ವೇಳೆ ತಾಪಮಾನವು ಕನಿಷ್ಠ 30°C ತಲುಪುವ ಸಾಧ್ಯತೆಯಿದೆ. ಆದರೆ, ಸಂಜೆ ವೇಳೆಗೆ ಕನಿಷ್ಠ ತಾಪಮಾನ 20°Cಗೆ ಇಳಿಕೆಯಾಗಬಹುದು. ಮೋಡ ಕವಿದ ವಾತಾವರಣ ಇದ್ದರೂ, ಮಳೆಯ ಮುನ್ಸೂಚನೆ ಇರುವುದಿಲ್ಲ ಎಂದು ತಿಳಿಸಿದೆ. ಇನ್ನು ಇದೀಗ ಇಂದು ನಡೆಯುವ ಜಿದ್ದಾಜಿದ್ದಿನ ಪಂದ್ಯದಲ್ಲಿ ಎರಡೂ ತಂಡಗಳು ಒತ್ತಡವನ್ನು ಯಾವ ರೀತಿ ನಿಭಾಯಿಸುತ್ತವೆ ಎಂಬುದೇ ಇದೀಗ ಎಲ್ಲಾರ ಪ್ರಶ್ನೆಯಾಗಿದೆ. ಅಲ್ಲದೆ, ಈ ಪಂದ್ಯ ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.












Click it and Unblock the Notifications