India VS Pakistan: ಪಾಕಿಸ್ತಾನಕ್ಕೆ 267 ರನ್ ಟಾರ್ಗೆಟ್ ನೀಡಿದ ಭಾರತ: ಹೇಗಿತ್ತು ಮ್ಯಾಚ್?
ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಯುದ್ಧದಂತೆ ಬಿಂಬಿಸಲಾಗುತ್ತೆ. ಹಾಗೇ ಮ್ಯಾಚ್ ಆರಂಭದಿಂದ ಹಿಡಿದು, ಮುಗಿಯುವ ತನಕ ಎರಡು ಕಡೆಯ ಅಭಿಮಾನಿಗಳು ಎಂಜಾಯ್ ಮಾಡಿ ಪ್ರತಿ ಕ್ಷಣವನ್ನೂ ಸಂಭ್ರಮಿಸುತ್ತಾರೆ. ಹೀಗೆ ಇಂದು ಕೂಡ ಭಾರತ & ಪಾಕಿಸ್ತಾನದ ನಡುವೆ ಭರ್ಜರಿ ಮ್ಯಾಚ್ ನಡೆದಿದ್ದು, ಪಾಕಿಸ್ತಾನ ತಂಡಕ್ಕೆ ಭಾರತ 267 ರನ್ ಟಾರ್ಗೆಟ್ ನೀಡಿದೆ.
ಭಾರತಕ್ಕೆ ಆರಂಭಿಕ ಆಘಾತ ಎದುರಾದರೂ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೋಡಿ ತಲಾ ಅರ್ಧ ಶತಕ ಗಳಿಸಿ ನೆರವಾದರು. ಅಂತಿಮವಾಗಿ ಭಾರತ ತಂಡ 10 ವಿಕೆಟ್ ಕಳೆದುಕೊಂಡು ಆಲೌಟ್ ಆಗುವ ಮೂಲಕ 266 ರನ್ ಗಳಿಸಿದೆ. ಹೀಗೆ ಪಾಕಿಸ್ತಾನಕ್ಕೆ 267 ರನ್ ಟಾರ್ಗೆಟ್ ನೀಡಿರುವ ಟೀಂ ಇಂಡಿಯಾ, ಪಂದ್ಯ ಗೆಲ್ಲಲು ರಣತಂತ್ರ ರೂಪಸಿದೆ. ಹಾಗಾದರೆ ಪಂದ್ಯ ಹೇಗಿತ್ತು? ಯಾರೆಲ್ಲಾ ಹೋರಾಟ ನಡೆಸುವ ಆಟ ಪ್ರದರ್ಶಿಸಿದರು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಪಾಕಿಸ್ತಾನ ವಿರುದ್ಧ ಗೆಲುವೇ ಮಂತ್ರ!
ಭಾರತದ ಅಭಿಮಾನಿಗಳು ಪಾಕಿಸ್ತಾನದ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಲ್ಲಿ ಇರ್ತಾರೆ. ಇನ್ನು ಭಾರತದ ಆಟಗಾರರು ಕೂಡ ಪಾಕಿಸ್ತಾನ ವಿರುದ್ಧ ಜಿದ್ದಾಜಿದ್ದಿನ ಫೈಟ್ ಕೊಡ್ತಾರೆ. ಈ ಪಂದ್ಯ ಕೂಡ ಹೀಗೆ ರೋಚಕವಾಗಿತ್ತು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಶುಭ್‌ಮನ್ ಗಿಲ್ & ರೋಹಿತ್ ಶರ್ಮಾ ಅಖಾಡಕ್ಕೆ ಪ್ರವೇಶ ಮಾಡಿದ್ದರು. ಆದ್ರೆ ಆರಂಭದಲ್ಲಿ ಚೆನ್ನಾಗಿ ಆಡಿದ್ದ ರೋಹಿತ್ ಶರ್ಮಾ ಔಟ್ ಆಗಿ ಪೆವಿಲಿಯನ್ ಸೇರಿದರು, ಇದಾದ ನಂತರ ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ಕೂಡ ಔಟ್ ಆದರು.
ಪಂದ್ಯದ ಗತಿ ಬದಲಾಗಿದ್ದು ಹೇಗೆ?
ಇನ್ನು ಮಳೆ ಕಾಟ ನಿಂತ ನಂತರ ಭಾರತ ಮೈಕೊಡವಿ ನಿಲ್ಲುವ ಸೂಚನೆ ನೀಡಿತ್ತು. ಈ ಸಂದರ್ಭದಲ್ಲೇ ಮತ್ತೊಂದು ವಿಕೆಟ್ ಬಿದ್ದಿತ್ತು. ಭಾರತ ತಂಡದ ಮೊತ್ತ 66 ರನ್ ಆಗಿದ್ದ ಸಂದರ್ಭದಲ್ಲೇ ಶುಭ್‌ಮನ್ ಗಿಲ್ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಒಟ್ಟಾರೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗಲೇ ನೋಡಿ ಅಖಾಡಕ್ಕೆ ಎಂಟ್ರಿಯಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಜೊತೆ ಸೇರಿ ಈ ಪಂದ್ಯದ ಗತಿಯನ್ನೇ ಬದಲಿಸಿದರು.

ಭಾರತಕ್ಕೆ ಬೌಲರ್‌ಗಳ ದೊಡ್ಡ ನೆರವು
ಇನ್ನೇನು ಪಾಕಿಸ್ತಾನಕ್ಕೆ ಭಾರತದಿಂದ ಸವಾಲಿನ ಮೊತ್ತ ಪಕ್ಕಾ ಎನ್ನಲಾಗಿತ್ತು. ಆದರೆ 82 ರನ್ ಗಳಿಸಿದ್ದ ಇಶಾನ್ ಕಿಶನ್ ಔಟ್ ಆದರು. ಹೀಗೆ ಇಶಾನ್ ಕಿಶನ್ ಔಟ್ ಆದ ನಂತರ ಹಾರ್ದಿಕ್ ಪಾಂಡ್ಯ ಸ್ವಲ್ಪ ಹೊತ್ತು ಹೋರಾಟ ನೀಡಿದರೂ ಅವರು ಕೂಡ 87 ರನ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ವಿಕೆಟ್ ಪತನ ಶುರುವಾಗಿ ಒಂದಾದ ಬಳಿಕ ಒಂದು ವಿಕೆಟ್ ಬಿತ್ತು. ಆದರೆ ಕೊನೆಯಲ್ಲಿ ಭಾರತದ ಬೌಲರ್‌ಗಳು ಉತ್ತಮ ಹೋರಾಟ ಪ್ರದರ್ಶಿಸಿದರು.
ಕೊನೆಯಲ್ಲಿ ಬುಮ್ರಾ ಒಂದಷ್ಟು ಹೋರಾಟ ತೋರಿದ ಹಿನ್ನೆಲೆ ಭಾರತ 250ರ ಗಡಿ ದಾಟಿ ಬಂತು. ಆದರೆ ನಸೀಮ್ ಶಾ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ವಿಕೆಟ್ ಒಪ್ಪಿಸಿ, 4 ರನ್ ಗಳಿಸಿ ಔಟ್ ಆದರು. ಈ ಮೂಲಕ ಭಾರತದ 9ನೇ ವಿಕೆಟ್ ಉರುಳಿತ್ತು. ಅಂತಿಮವಾಗಿ ಭಾರತ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗುವ ಮೂಲಕ 266 ರನ್ ಗಳಿಸಿತು. ಈ ಮೂಲಕ ಪಾಕಿಸ್ತಾನಕ್ಕೆ 267 ರನ್‌ಗಳ ಟಾರ್ಗೆಟ್ ನೀಡಿದೆ. ಪಾಕಿಸ್ತಾನದ ಪರ ಶಾಹೀನ್ ಶಾ ಅಫ್ರಿದಿ 4 ವಿಕೆಟ್ ಗಳಿಸಿದ್ದು, ನಸೀಮ್ ಶಾ 3 ವಿಕೆಟ್ ಹಾಗೂ ಹ್ಯಾರಿಸ್ 3 ವಿಕೆಟ್ ಪಡೆದು ಪಾಕಿಸ್ತಾನ ತಂಡಕ್ಕೆ ನೆರವಾದರು.
ಟೀಂ ಇಂಡಿಯಾಗೆ ಇಶಾನ್ & ಹಾರ್ದಿಕ್ ಬಲ
ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ತಲಾ ಅರ್ಧ ಶತಕದ ಗುರಿ ತಲುಪುವ ಮೂಲಕ ಭಾರತಕ್ಕೆ ನೆರವಾಗಿದ್ದರು. ಪಾಕಿಸ್ತಾನಿ ಬೌಲರ್‌ಗಳನ್ನು ಶಾಂತವಾಗಿ ಎದುರಿಸಿದ ಭಾರತದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು, ನಿಧಾನವಾಗಿ ರನ್ ಕದ್ದರು. ಹಾಗೇ ಸಮಯ ಸಿಕ್ಕಾಗೆಲ್ಲಾ ಬೌಂಡರಿ ಹೊಡೆದು ಉತ್ತಮವಾಗಿ ಆಟವಾಡಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೋಡಿ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಬೆನ್ನೆಲುಬಾಗಿ ನಿಂತರು. ಆದರೆ ಇಬ್ಬರ ನಿರ್ಗಮನದ ನಂತರ ಮತ್ತೆ ಭಾರತ ತಂಡದ ರನ್ ಕುಸಿದಿತ್ತು.












Click it and Unblock the Notifications