Ind vs Eng: 5 ವಿಕೆಟ್ ಪಡೆದು ಹೊಸ ದಾಖಲೆ ಬರೆದ ವರುಣ್ ಚಕ್ರವರ್ತಿ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತೊಮ್ಮೆ ಇಂಗ್ಲೆಂಡ್ ಬ್ಯಾಟರ್ ಗಳನ್ನು ಕಾಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ವರುಣ್ ಚಕ್ರವರ್ತಿ 5 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಚಕ್ರವರ್ತಿ ಸ್ಪಿನ್ ಮಂತ್ರಕ್ಕೆ ಇಂಗ್ಲೆಂಡ್ ಬಳಿ ಉತ್ತರವೇ ಇಲ್ಲದಂತಾಗಿತ್ತು.
ಮಿಸ್ಟರಿ ಸ್ಪಿನ್ನರ್ ಎಂದೇ ಹೆಸರಾಗಿರುವ ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲ ಪಂದ್ಯದಿಂದಲೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ವರುಣ್ ಚಕ್ರವರ್ತಿ 4 ಓವರ್ ಗಳಲ್ಲಿ 24 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ಹೊಸ ದಾಖಲೆ ಬರೆದ ವರುಣ್ ಚಕ್ರವರ್ತಿ
ಮೂರನೇ ಟಿ20 ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಾರಾಷ್ಟ್ರೀಯ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಕೂಡ ಅವರು ಐದು ವಿಕೆಟ್ ಪಡೆದಿದ್ದರು. ಈಗ ಇದು ಎರಡನೇ ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, ಭುವನೇಶ್ವರ್ ಕುಮಾರ್ ಮತ್ತು ಕುಲದೀಪ್ ಯಾದವ್ ಬಳಿಕ ಈ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡರು.
ಭರ್ಜರಿ ವಾಪಸಾತಿ ಮಾಡಿದ ಚಕ್ರವರ್ತಿ
2024ರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಭಾರತ ತಂಡಕ್ಕೆ ವಾಪಸಾತಿ ಮಾಡಿದ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 2024ರ ಐಪಿಎಲ್‌ನಲ್ಲಿ ಕೆಕೆಆರ್ ಪರವಾಗಿ ಆಡಿದ್ದ ಅವರು 21 ವಿಕೆಟ್ ಪಡೆಯುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಐಪಿಎಲ್‌ನಲ್ಲಿ ಮಾತ್ರವಲ್ಲದೆ 2023ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ 19 ವಿಕೆಟ್ ಪಡೆದುಕೊಂಡಿದ್ದರು. ಅದಾದ ಬಳಿಕ ಭಾರತ ತಂಡಕ್ಕೆ ವಾಪಸಾತಿ ಮಾಡಿದ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 10.96 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. 8.8 ಬೌಲಿಂಗ್ ಸ್ಟ್ರೈಕ್ ರೇಟ್ ಹೊಂದಿರುವುದು ಅವರ ಮಾರಕ ಬೌಲಿಂಗ್‌ಗೆ ಸಾಕ್ಷಿಯಾಗಿದೆ.
ದ್ವಿಪಕ್ಷೀಯ ಟಿ20 ಸರಣಿಯಲ್ಲಿ 10ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನ್ನುನ ಸಾಧನೆ ಮಾಡಿದ್ದಾರೆ. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 12 ವಿಕೆಟ್ ಪಡೆದಿದ್ದರು. ಈಗ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ 2016ರಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.












Click it and Unblock the Notifications