India vs Bangladesh: ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ಸವಾಲು; ಸಮಯ, ನೇರಪ್ರಸಾರ ಮಾಹಿತಿ
ಅಂಡರ್ 19 ಏಷ್ಯಾ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಭಾರತ ಫೈನಲ್ ತಲುಪಿದ್ದು ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಜ್ಜಾಗಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 46.2 ಓವರ್ ಗಳಲ್ಲಿ 173 ರನ್‌ಗಳಿಗೆ ಆಲೌಟ್ ಆಯಿತು. ಅಮೋಘ ಪ್ರದರ್ಶನ ನೀಡಿದ ಭಾರತ 21.4 ಓವರ್ ಗಳಲ್ಲಿ 174 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಚೇತನ್ ಶರ್ಮಾ 3 ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ ಮತ್ತು ಆಯುಷ್ ಮ್ಹಾತ್ರೆ ತಲಾ 2 ವಿಕೆಟ್ ಪಡೆದರು. ಆಯುಷ್ ಮ್ಹಾತ್ರೆ 34 ರನ್ ಗಳಿಸಿದರೆ, 13 ವರ್ಷದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 67 ರನ್ ಗಳಿಸಿ ಮಿಂಚಿದರು. ಆಂಡ್ರೆ ಸಿದ್ಧಾರ್ಥ್ 22 ರನ್ ಗಳಿಸಿದರೆ, ನಾಯಕ ಮೊಹಮ್ಮದ್ ಅಮಾನ್ ಅಜೇಯ 25 ರನ್ ಗಳಿಸಿದರು.

ಮತ್ತೊಂದು ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಭಾರತವನ್ನು ಸೋಲಿಸಿದ್ದ ಪಾಕಿಸ್ತಾನ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಫೈನಲ್ ಪಂದ್ಯ ಯಾವಾಗ?
ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯ ಡಿಸೆಂಬರ್ 8ರಂದು ಭಾನುವಾರ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ ಬೆಳಿಗ್ಗೆ 10.30ಕ್ಕೆ ಪಂದ್ಯ ಆರಂಭವಾಗಲಿದೆ.
ನೇರಪ್ರಸಾರ ಎಲ್ಲಿ ವೀಕ್ಷಿಸಬಹುದು?
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಫೈನಲ್ ಪಂದ್ಯದ ನೇರಪ್ರಸಾರ ನೋಡಬಹುದು. ಸೋನಿಲಿವ್ ಅಪ್ಲಿಕೇಷನ್ ಮತ್ತು ವೆಬ್‌ಸೈಟ್‌ನಲ್ಲಿ ಕೂಡ ಈ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದಾಗಿದೆ.
ಪಿಚ್ ವರದಿ ಹೇಗಿದೆ?
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. ಇಲ್ಲಿ ಈವರೆಗೂ 58 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದು, 22 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದ್ದು, 34 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಇದನ್ನು ಗಮನಿಸಿದರೆ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಸ್ಪಿನ್ನರ್ ಗಳಿಗೆ ಪಿಚ್ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಭಾರತ ತಂಡದಲ್ಲಿ ಉತ್ತಮ ಬ್ಯಾಟಿಂಗ್, ಆಲ್‌ರೌಂಡರ್ ಪಡೆಯೇ ಇದ್ದು, ಫೈನಲ್‌ನಲ್ಲಿ ಗೆಲ್ಲುವ ಫೇವರಿಟ್ ಭಾರತವೇ ಆಗಿದೆ. ಆದರೆ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನೇ ಮಣಿಸಿರುವ ಬಾಂಗ್ಲಾದೇಶ ಫೈನಲ್‌ನಲ್ಲಿ ಭಾರತಕ್ಕೆ ಆಘಾತ ನೀಡುವ ಲೆಕ್ಕಚಾರದಲ್ಲಿದೆ.












Click it and Unblock the Notifications