India vs Bangladesh: ಎರಡನೇ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ; ಸಂಭಾವ್ಯ ಆಡುವ ಬಳಗ, ಪಿಚ್ ವರದಿ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ 280 ರನ್‌ಗಳ ಬೃಹತ್ ಗೆಲುವು ಸಾಧಿಸುವ ಮೂಲಕ 1-0 ಮುನ್ನಡೆ ಸಾಧಿಸಿರುವ ಭಾರತ, ನಾಳೆಯಿಂದ (ಶುಕ್ರವಾರ) ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಎರಡನೇ ಪಂದ್ಯ ಆರಂಭವಾಗಲಿದ್ದು, ಬಾಂಗ್ಲಾದೇಶ ಭಾರತಕ್ಕೆ ಶಾಕ್ ಕೊಡಲು ಸಜ್ಜಾಗಿದೆ. ಆದರೆ ರೋಹಿತ್ ಪಡೆಯನ್ನು ಮಣಿಸುವುದು ಅಷ್ಟು ಸುಲಭವಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ಉತ್ತಮ ಅವಕಾಶವಿದೆ. ಆದ್ದರಿಂದ ಎರಡನೇ ಟೆಸ್ಟ್ ಪಂದ್ಯವನ್ನು ಕೂಡ ಗೆಲ್ಲುವ ಉದ್ದೇಶ ಭಾರತ ತಂಡದ್ದಾಗಿದೆ.

ಕಾನ್ಪುರ ಹವಾಮಾನ ವರದಿ
ಕಾನ್ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಮಳೆಯ ಭೀತಿ ಶುರುವಾಗಿದೆ. ಮೊದಲ ಮೂರು ದಿನಗಳು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದೆ. ಮೋಡ ಕವಿದ ವಾತಾವರಣ ಇರುವ ಕಾರಣ, ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ವೇಗಿಗಳಿಗೆ ಸಹಾಯವಾಗುವ ಸಾಧ್ಯತೆ ಇದ್ದು, ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಭಾರತ ತಂಡದಲ್ಲಿ ಬದಲಾವಣೆ?
ಮೊದಲ ಪಂದ್ಯದಲ್ಲಿ ಗೆದ್ದು ಬೀಗುತ್ತಿರುವ ಭಾರತ ಎರಡನೇ ಟೆಸ್ಟ್‌ಗೆ ಬದಲಾವಣೆ ಮಾಡುವ ಸಾಧ್ಯತೆ ಇದೆ. ಪಂದ್ಯದ ಆರಂಭಕ್ಕೆ ಮುನ್ನ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರು ಅಭ್ಯಾಸ ಮಾಡದೆ ವಿಶ್ರಾಂತಿ ಪಡೆದುಕೊಂಡಿದ್ದರು. ಎರಡನೇ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್‌ಗಳು ಆಡುವ ಸಾಧ್ಯತೆ ಇದೆ. ಬುಮ್ರಾ ಅಥವಾ ಸಿರಾಜ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಕುಲದೀಪ್ ಆಡುವ ಸಾಧ್ಯತೆ ಇದೆ.
ಬಾಂಗ್ಲಾದೇಶ ತಂಡದಲ್ಲಿ ಬದಲಾವಣೆ
ತಂಡದ ಪ್ರಮುಖ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇದೇ ಕೊನೆಯ ಟೆಸ್ಟ್ ಪಂದ್ಯವಾಗಬಹುದು ಎಂದು ಹೇಳಿದ್ದಾರೆ. ಶಕೀಬ್‌ಗಾಗಿ ಪಂದ್ಯ ಗೆಲ್ಲುವ ಯೋಜನೆಯಲ್ಲಿ ಬಾಂಗ್ಲಾದೇಶ ತಂಡ. ತಂಡದಲ್ಲಿ ಒಂದು ಬದಲಾವಣೆ ನಿರೀಕ್ಷೆ ಮಾಡಲಾಗಿದ್ದು, ಹೆಚ್ಚುವರಿ ಸ್ಪಿನ್ನರ್ ಆಡಿಸುವ ಸಾಧ್ಯತೆಯಿದೆ.
ಭಾರತ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಕುಲದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ / ಜಸ್ಪ್ರೀತ್ ಬುಮ್ರಾ.
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ
ಶದ್ಮನ್ ಇಸ್ಲಾಂ, ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್/ ನಾಹಿದ್ ರಾಣಾ, ತೈಜುಲ್ ಇಸ್ಲಾಂ.












Click it and Unblock the Notifications