WTC Points Table: ಅಡಿಲೇಡ್ ಸೋಲಿನ ಬಳಿಕ ಭಾರತಕ್ಕೆ ಮತ್ತೊಂದು ಆಘಾತ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಸೋಲು ಕಂಡಿದ್ದು ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಭಾರತ ಅಗ್ರಸ್ಥಾನದಲ್ಲಿತ್ತು, ಆದರೆ ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳನ್ನು ಸೋತಿದ್ದು ಭಾರತ ಫೈನಲ್ ಹಾದಿಯನ್ನು ತುಂಬಾ ಕಷ್ಟವಾಗಿಸಿತು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದರೆ ಮಾತ್ರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಾಧ್ಯವಿದ್ದು, ಎರಡನೇ ಟೆಸ್ಟ್ ಪಂದ್ಯವನ್ನು ಸೋತಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದೆ.

ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಗೆದ್ದ ಆಸ್ಟ್ರೆಲಿಯಾ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ಕೂಡ ಫೈನಲ್ ರೇಸ್‌ನಲ್ಲಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದೆ.
ಮೂರನೇ ಸ್ಥಾನದಲ್ಲಿ ಭಾರತ
2023-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಈವರೆಗೂ 14 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 9 ಪಂದ್ಯ ಗೆದ್ದು 4 ಪಂದ್ಯಗಳಲ್ಲಿ ಸೋತಿದ್ದು 60.710 ಶೇಕಡಾವಾರು ಅಂಕ (ಪಿಸಿಟಿ) ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಸೋತಿದ್ದು 59.260 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ 16 ಪಂದ್ಯಗಳನ್ನಾಡಿದ್ದು 9 ಪಂದ್ಯ ಗೆದ್ದು 6 ಪಂದ್ಯಗಳಲ್ಲಿ ಸೋತಿದ್ದು 57.290 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಎಲ್ಲಾ ಪಂದ್ಯ ಗೆದ್ದರೆ ಮಾತ್ರ ಫೈನಲ್ ಆಸೆ
ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಬೇಕು ಎಂದರೆ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಇನ್ನು ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. 2023-2025 ಟೆಸ್ಟ್ ಸೈಕಲ್‌ನಲ್ಲಿ ಭಾರತಕ್ಕೆ ಇದೇ ಕೊನೆಯ ಟೆಸ್ಟ್ ಸರಣಿಯಾಗಿದೆ. ಆಸ್ಟ್ರೇಲಿಯಾ ಈ ಸರಣಿ ನಂತರ ಶ್ರೀಲಂಕಾಗೆ ಪ್ರಯಾಣ ಮಾಡಲಿದ್ದು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಕೂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.
ಭಾರತ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಫೈನಲ್‌ಗೆ ತಲುಪಲು ಅವಕಾಶ ಇರುತ್ತದೆ. ದಕ್ಷಿಣ ಆಫ್ರಿಕಾ ಏನಾದರೂ ಶ್ರೀಲಂಕಾ ವಿರುದ್ಧ ಇನ್ನೆರಡು ಪಂದ್ಯ ಗೆದ್ದರೆ, ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧದ ಸರಣಿ ಗೆಲ್ಲಲೇಬೇಕಾಗುತ್ತದೆ. ಒಂದು ವೇಳೆ ಭಾರತ ಇನ್ನೊಂದು ಪಂದ್ಯ ಸೋತರೂ ಫೈನಲ್ ತಲುಪಲು ದಕ್ಷಿಣ ಆಫ್ರಿಕಾ ಸೋಲಿಗೆ ಕಾಯಬೇಕಾಗುತ್ತದೆ.












Click it and Unblock the Notifications