Paris Olympics: ಹರ್ಮನ್ ಮಿಂಚು: ಐರ್ಲೆಂಡ ವಿರುದ್ಧ ಭಾರತಕ್ಕೆ ಗೆಲುವು
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಪುರುಷರ ಹಾಕಿ ತಂಡ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿ, ಅಗ್ರ ಸ್ಥಾನವನ್ನು ಪಡೆದಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತ ತಂಡ 2-0 ಯಿಂದ ಐರ್ಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ.

ಹರ್ಮನ್ ಮಿಂಚು
ಒಲಿಂಪಿಕ್ಸ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3-2ರಿಂದ ಮಣಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಅರ್ಜೆಂಟಿನಾ ವಿರುದ್ಧ 1-1ರಿಂದ ಡ್ರಾ ಸಾಧಿಸಿತು. ಇನ್ನು ಮೂರನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಆರ್ಭಟಿಸಿ ಬಿ ಗುಂಪಿನಲ್ಲಿ 7 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ.
ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಪಂದ್ಯದ ಮೊದಲಾವಧಿ ಹಾಗೂ ಎರಡನೇ ಅವಧಿಯಲ್ಲಿ ತಲಾ ಒಂದೊಂದು ಗೋಲು ಬಾರಿಸಿದ ಇವರು ಅಬ್ಬರಿಸಿದರು. ಈ ಮೂಲಕ ಭಾರತ ಗೆಲುವಿನಲ್ಲಿ ಇವರು ಮಹತ್ವದ ಪಾತ್ರವನ್ನು ವಹಿಸಿದರು.
ಮೊದಲಾವಧಿಯಲ್ಲಿ ಅಬ್ಬರ
ಮೊದಲಾವಧಿಯ ಆಟದಲ್ಲಿ ಭಾರತೀಯ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದರು. ಇದರ ಪರಿಣಾಮ ಚೆಂಡಿನ ಮೇಲೆ ಹೆಚ್ಚಿನ ಹಿಡಿತವನ್ನು ಸಾಧಿಸಿ ಪದೆ ಪದೇ ಗೋಲು ಪೆಟ್ಟಿಗೆಯತ್ತ ಹೋಗಲು ಪ್ರಯತ್ನಿಸಿದರು. ಇದರ ಪರಿಣಾಮವೇ 11ನೇ ನಿಮಿಷದಲ್ಲಿ ಒಂದು ಅವಕಾಶ ಲಭಿಸಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಹರ್ಮನ್ ಪ್ರೀತ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಇನ್ನು ಎರಡನೇ ಅವಧಿಯ ಆರಂಭದಲ್ಲೂ ಹರ್ಮನ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಈ ಮೂಲಕ ಐರ್ಲೆಂಡ್ ತಂಡಕ್ಕೆ ಶಾಕ್ ನೀಡಲು ಭಾರತ ಬರ್ಜರಿ ಪ್ಲ್ಯಾನ್ ಮಾಡಿಕೊಂಡಿತು. ಈ ಅವಧಿಯಲ್ಲಿ ಐರ್ಲೆಂಡ್ ಸಹ ಗೋಲು ಬಾರಿಸುವ ಆಸೆಯೊಂದಿಗೆ ಕಣಕ್ಕೆ ಇಳಿಯಿತು. ಆದರೆ ಫಲಿಸಲಿಲ್ಲ.
ಕೊನೆಯ ಎರಡೂ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಪ್ರಯತ್ನ ಕೈ ಸುಟ್ಟಿತು. ಈ ಮೂಲಕ ಭಾರತ ಪಂದ್ಯವನ್ನು ಗೆದ್ದು ಬೀಗಿತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಆಗಸ್ಟ್ 1 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.












Click it and Unblock the Notifications