India vs Pakistan: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಮಹಿಳಾ ಏಷ್ಯಾಕಪ್ 2024ರ ಪಂದ್ಯಾವಳಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ದಂಬುಲಾದ ರಣಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟಿಗರು ಮಿಂಚಿದರು. ಯಾವ ಹಂತದಲ್ಲೂ ಪಾಕಿಸ್ತಾನಕ್ಕೆ ಸವಾಲು ಹಾಕಲು ಅವಕಾಶ ಕೊಡದೆ ಕಟ್ಟಿಹಾಕಿದರು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ದೊಡ್ಡ ಮೊತ್ತ ಕಲೆಹಾಕಿ ಭಾರತಕ್ಕೆ ಸವಾಲು ಹಾಕುವ ಯೋಜನೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರತದ ಬೌಲಿಂಗ್ ಪಡೆ ಶಾಕ್ ನೀಡಿತು.
ಯಾವ ಹಂತದಲ್ಲೂ ಉತ್ತಮ ಜೊತೆಯಾಟ ಬರಲೇ ಇಲ್ಲ, ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 19.2 ಓವರ್ ಗಳಲ್ಲಿ 108 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಸಿದ್ರಾ ಅಮೀನ್ 25 ರನ್, ತುಬಾ ಹಸನ್ 22 ರನ್ ಮತ್ತು ಫಾತಿಮಾ ಸನಾ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು.
ಭಾರತದ ಪರ ದೀಪ್ತಿ ಶರ್ಮಾ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 2 ವಿಕೆಟ್ ಪಡೆದರು.
ಸ್ಮೃತಿ, ಶಫಾಲಿ ಮಿಂಚು!
ಸುಲಭ ಗುರಿಯನ್ನು ಬೆನ್ನತ್ತಿದ್ದ ಭಾರತ 14.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 109 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಹಾಲಿ ಚಾಂಪಿಯನ್ 8ನೇ ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಸೂಚನೆ ಕೊಟ್ಟಿದೆ.
ಸ್ಮೃತಿ ಮಂಧಾನ 31 ಎಸೆತಗಳಲ್ಲಿ 45 ರನ್ ಗಳಿಸಿದರೆ, ಶಫಾಲಿ ವರ್ಮಾ 29 ಎಸೆತಗಳಲ್ಲಿ 40 ರನ್ ಗಳಿಸಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ಸುಲಭ ಗೆಲುವು ಸಾಧಿಸಿದೆ.












Click it and Unblock the Notifications