Ind vs Eng: ಆಂಗ್ಲರಿಗೆ ಸೋಲಿನ ಆಘಾತ; ಸರಣಿ ಗೆದ್ದ ಭಾರತ
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 15 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದುಕೊಂಡಿದೆ. ಪಾಂಡ್ಯ, ದುಬೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ರಾಣಾ, ಬಿಷ್ಣೋಯ್ ಬೌಲಿಂಗ್‌ನಲ್ಲಿ ಮಿಂಚಿದರು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬೌಲಿಂಗ್ ಆರಂಭಿಸಿದ ಭಾರತಕ್ಕೆ ಎರಡನೇ ಓವರ್ ನಲ್ಲೇ ತ್ರಿಬಲ್ ಶಾಕ್ ಸಿಕ್ಕಿತು. ಶಕೀಬ್ ಮಹ್ಮೂದ್ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು.

ಸಂಜು ಸ್ಯಾಮ್ಸನ್ ಕೇವಲ 1 ರನ್ ಗಳಿಸಿ ಔಟಾದರೆ, ತಿಲಕ್ ವರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ರನ್ ಗಳಿಸುವ ಮುನ್ನವೇ ವಿಕೆಟ್ ಒಪ್ಪಿಸಿದರು. ಬಳಿಕ ಅಭಿಷೇಕ್ ಶರ್ಮಾ ಜೊತೆಯಾದ ರಿಂಕು ಸಿಂಗ್ ಭಾರತಕ್ಕೆ ಚೇತರಿಕೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 45 ರನ್ ಕಲೆ ಹಾಕಿತು.
19 ಎಸೆತಗಳಲ್ಲಿ 29 ರನ್ ಗಳಿಸದ್ದ ಅಭಿಷೇಕ್ ಶರ್ಮಾ ಔಟಾದರು. ರಿಂಕು ಸಿಂಗ್ ಕೂಡ 26 ಎಸೆತಗಳಲ್ಲಿ 30 ರನ್ ಗಳಿಸಿದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಭಾರತ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 53 ರನ್ ಗಳಿಸಿದರೆ, ಶಿವಂ ದುಬೆ 34 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ 53 ರನ್ ಗಳಿಸಿದರು. ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
ಭರ್ಜರಿ ಆರಂಭ ಪಡೆದ ಇಂಗ್ಲೆಂಡ್
ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಸ್ಫೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 6 ಓವರ್ ಗಳಲ್ಲೇ 62 ರನ್ ಗಳಿಸಿದರು. 19 ಎಸೆತಗಳಲ್ಲಿ 39 ರನ್ ಗಳಿಸಿದ್ದ ಬೆನ್ ಡಕೆಟ್ ರವಿ ಬಿಷ್ಣೋಯ್ ಅವರ ಬೌಲಿಂಗ್‌ನಲ್ಲಿ ಔಟಾದರು. 23 ರನ್ ಗಳಸಿದ್ದ ಫಿಲ್ ಸಾಲ್ಟ್‌ರನ್ನು ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು.
ಹ್ಯಾರಿ ಬ್ರೂಕ್ 26 ಎಸೆತಗಳಲ್ಲಿ 56 ರನ್ ಸಿಡಿಸುವ ಮೂಲಕ ಇಂಗ್ಲೆಂಡ್‌ಗೆ ಗೆಲುವಿನ ಭರವಸೆ ಮೂಡಿಸಿದರು ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಗಾಯಗೊಂಡ ಬಳಿಕ ಬದಲೀ ಆಟಗಾರನಾಗಿ ಕಣಕ್ಕಿಳಿದ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದರು.
ಹರ್ಷಿತ್ ರಾಣಾ ಮತ್ತು ರವಿ ಬಿಷ್ಣೋಯ್ ತಲಾ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರು. ಭಾರತದ ಮಾರಕ ಬೌಲಿಂಗ್ ದಾಳಿ ಎದುರು ತತ್ತರಿಸಿದ ಇಂಗ್ಲೆಂಡ್ 19.4 ಓವರ್ ಗಳಲ್ಲಿ 166 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಸರಣಿಯ ಕೊನೆಯ ಪಂದ್ಯ ಫೆಬ್ರವರಿ 2ರಂದು ಮುಂಬೈನಲ್ಲಿ ನಡೆಯಲಿದೆ.












Click it and Unblock the Notifications