Duleep Trophy: ಇಂಡಿಯಾ ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಡಿಯಾ ಸಿ ತಂಡ
ದುಲೀಪ್ ಟ್ರೋಫಿ ಪಂದ್ಯಾವಳಿಯ ತಮ್ಮ ಮೊದಲ ಪಂದ್ಯದಲ್ಲೇ ಇಂಡಿಯಾ ಸಿ ತಂಡ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂಡಿಯಾ ಡಿ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಇಂಡಿಯಾ ಸಿ ತಂಡ, ಪಂದ್ಯದ ಮೂರನೇ ದಿನ ಗೆದ್ದು ಬೀಗಿದೆ. ಮನವ್ ಸುತಾರ್ ಒಟ್ಟು 8 ವಿಕೆಟ್ ಗಳಿಸಿ ಇಂಡಿಯಾ ಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಅನಂತಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಡಿ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಆಗಿತ್ತು. ವಿಜಯ್ ಕುಮಾರ್ ವೈಶಾಖ್ ಪ್ರಮುಖ 3 ವಿಕೆಟ್ ಪಡೆದರೆ, ಅನ್ಷುಲ್ ಮತ್ತು ಹಿಮಾಂಶು ಚೌಹಾಣ್ ತಲಾ 2 ವಿಕೆಟ್ ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಇಂಡಿಯಾ ಸಿ 168 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೇವಲ 4 ರನ್‌ಗಳ ಮುನ್ನಡೆ ಸಾಧಿಸಿತು. ಬಾಬಾ ಇಂದ್ರಜಿತ್ 72 ರನ್ ಗಳಿಸಿದರೆ, ಅಭಿಷೇಕ್ ಪೊರೆಲ್ 34 ರನ್ ಗಳಿಸಿದ್ದರು. ಇಂಡಿಯಾ ಡಿ ತಂಡದ ಬೌಲರ್ ಹರ್ಷಿತ್ ರಾಣಾ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಸರಂಶ್ ಜೈನ್ ತಲಾ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಡಿ ತಂಡವು 236 ರನ್‌ಗಳಿಗೆ ಆಲೌಟ್ ಆಗುವ ಮೂಲಕ, ಇಂಡಿಯಾ ಸಿ ತಂಡಕ್ಕೆ 232 ರನ್‌ಗಳ ಗುರಿಯನ್ನು ನೀಡಿತು. ಇಂಡಿಯಾ ಡಿ ತಂಡದ ನಾಯಕ ಶ್ರೇಯಸ್ ಅಯ್ಯರ್ 54 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 56 ರನ್, ರಿಕಿ ಭುಯಿ 44 ರನ್ ಗಳಿಸಿದರು. ಮನವ್ ಸುಥಾರ್ ಪ್ರಮುಖ 7 ವಿಕೆಟ್ ಪಡೆದರೆ, ವೈಶಾಖ್ 2 ವಿಕೆಟ್ ಪಡೆದರು.
ಸವಾಲಿನ ಗುರಿಯನ್ನು ಬೆನ್ನತ್ತಿದ ಇಂಡಿಯಾ ಸಿ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ನಾಯಕ ರುತುರಾಜ್ ಗಾಯಕ್ವಾಡ್ 46 ರನ್, ಆರ್ಯನ್ 47 ರನ್, ರಜತ್ ಪಟಿದಾರ್ 44 ರನ್, ಅಭಿಷೇಕ್ ಪೊರೆಲ್ 36 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಈ ಗೆಲುವಿನ ಮೂಲಕ 6 ಅಂಕ ಪಡೆದ ಇಂಡಿಯಾ ಸಿ ಅಂಕಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲದೆ.












Click it and Unblock the Notifications