ಗೆಲುವಿಗೊಂದು ಹ್ಯಾಂಡ್ ಶೇಕ್ ಇಲ್ಲ.. ಸೂರ್ಯ ಫಾಲೋ ಮಾಡಿದ ಹರ್ಮನ್‌ಪ್ರೀತ್ ಕೌರ್.. ವಿಶ್ವಮಟ್ಟದಲ್ಲಿ ಪಾಕ್‌ಗೆ ಮತ್ತೆ ಮುಖಭಂಗ
Women's t20 world cup 2026: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾನುವಾರ (ಜೂನ್ 14) ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲೇ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 64 ರನ್‌ಗಳ ಅಂತರದಿಂದ ಧೂಳೀಪಟ ಮಾಡಿದೆ. ಆಲ್‌ರೌಂಡ್ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಕೇವಲ ಮೈದಾನದ ಆಟದಲ್ಲಿ ಮಾತ್ರವಲ್ಲದೆ ಕಠಿಣ ನಿರ್ಧಾರಗಳ ಮೂಲಕವೂ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ಉಂಟುಮಾಡಿದೆ.
ಈ ಪಂದ್ಯವು ಭಾರತದ ಬ್ಯಾಟಿಂಗ್ ಅಬ್ಬರದ ಹೊರತಾಗಿ ಮತ್ತೊಂದು ಪ್ರಮುಖ ರಾಜತಾಂತ್ರಿಕ ಕಾರಣಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಅನುಸರಿಸಿಕೊಂಡು ಬರುತ್ತಿರುವ 'ನೋ ಹ್ಯಾಂಡ್‌ಶೇಕ್' (ಹಸ್ತಲಾಘವ ಇಲ್ಲ) ನೀತಿಯನ್ನು ಈ ಪಂದ್ಯದಲ್ಲೂ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಈ ಹಿಂದೆ ಪುರುಷರ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕ್ ವಿರುದ್ಧದ ಪಂದ್ಯದ ವೇಳೆ ಅನುಸರಿಸಿದ್ದ ಕಠಿಣ ನಡೆಯನ್ನೇ ಈಗ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಮುಂದುವರಿಸಿದ್ದಾರೆ.

ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಮುಖಭಂಗ
ಪಂದ್ಯದ ಆರಂಭದಲ್ಲಿ ಟಾಸ್ ಪ್ರಕ್ರಿಯೆ ಮುಗಿದ ತಕ್ಷಣ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡಲಿಲ್ಲ. ಬದಲಿಗೆ ಕೇವಲ ದೂರದಿಂದಲೇ ತಲೆದೂಗುವ ಮೂಲಕ ಮೈದಾನದ ನಿಯಮವನ್ನು ಪಾಲಿಸಿ ಕ್ರೀಡಾಂಗಣದಿಂದ ಹೊರನಡೆದರು. ಪಂದ್ಯದಲ್ಲಿ ಗೆದ್ದ ಬಳಿಕವೂ ಇದೇ ಮುಂದುವರೆಯಿತು. ಬಿಸಿಸಿಐನ ಈ ಕಟ್ಟುನಿಟ್ಟಿನ ನೀತಿಯಿಂದಾಗಿ ವಿಶ್ವ ವೇದಿಕೆಯಲ್ಲೇ ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ತೀವ್ರ ಮುಖಭಂಗ ಆಗಿದೆ.
ಸ್ಮೃತಿ, ರಿಚಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭದಲ್ಲಿ ಭಾರತ ತಂಡ 3.2 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಜೊತೆಯಾದ ಉಪನಾಯಕಿ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೋಡಿ 63 ಎಸೆತಗಳಲ್ಲಿ 91 ರನ್‌ಗಳ ಉತ್ತಮ ಜೊತೆಯಾಟವಾಡಿ ತಂಡವನ್ನು ಅಪಾಯದ ಸುಳಿಯಿಂದ ಹೊರತಂದರು.
ಅದ್ಭುತ ಲಯದಲ್ಲಿದ್ದ ಸ್ಮೃತಿ ಮಂಧಾನ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 68 ರನ್ ಚಚ್ಚಿ ಪಾಕ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಹರ್ಮನ್‌ಪ್ರೀತ್ 35 ಎಸೆತಗಳಲ್ಲಿ 36 ರನ್ ಗಳಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್ ರಿಚಾ ಘೋಷ್ ಅವರು ಕೇವಲ 17 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಪರಿಣಾಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ರನ್ ಬೆನ್ನಟ್ಟಲಾಗದೆ ತತ್ತರಿಸಿದ ಪಾಕಿಸ್ತಾನ
ಭಾರತ ನೀಡಿದ್ದ 171 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭದಿಂದಲೇ ಯಾವುದೇ ಅವಕಾಶ ನೀಡಲಿಲ್ಲ. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ದೀಪ್ತಿ ಶರ್ಮಾ (5 ವಿಕೆಟ್) ಮತ್ತು ಶ್ರೀ ಚರಣಿ ಪಾಕ್ ಬ್ಯಾಟರ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕಿದರು. ಒತ್ತಡವನ್ನು ನಿಭಾಯಿಸಲು ವಿಫಲವಾದ ಪಾಕಿಸ್ತಾನದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿ ಸತತವಾಗಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಪಾಕಿಸ್ತಾನ ತಂಡವು ಈ ಬೃಹತ್ ಗುರಿ ತಲುಪುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಆಲ್‌ಔಟ್ ಆಗಿ ಹೀನಾಯ ಸೋಲನುಭವಿಸಿತು. ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಪಾಕಿಸ್ತಾನದ ವಿರುದ್ಧ 64 ರನ್‌ಗಳ ಐತಿಹಾಸಿಕ ಜಯ ಸಾಧಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಒಟ್ಟಿನಲ್ಲಿ ಇದೀಗ ನೋ ಹ್ಯಾಂಡ್‌ಶೇಕ್ ನೀತಿಯು ಪಾಕಿಸ್ತಾನವನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.












Click it and Unblock the Notifications