India vs Austraia: ಕೊಹ್ಲಿ, ಜೈಸ್ವಾಲ್ ಬಳಿಕ ಅಬ್ಬರಿಸಿದ ಬುಮ್ರಾ, ಸಿರಾಜ್; ಭಾರಿ ಗೆಲುವಿನತ್ತ ಟೀಂ ಇಂಡಿಯಾ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಭಾರತದ ಅಬ್ಬರಕ್ಕೆ ಆಸ್ಟ್ರೇಲಿಯಾ ನಲುಗಿದೆ. ಮೊದಲ ಟೆಸ್ಟ್‌ನ ಮೂರನೇ ದಿನದಾಟ ಮುಕ್ತಾಯವಾಗಿದ್ದು, 534 ರನ್‌ಗಳ ಬೃಹತ್ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 12 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದು ಸೋಲಿನ ಸುಳಿಗೆ ಸಿಲುಕಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 172 ರನ್ ಗಳಿಸಿ 218 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ಮೂರನೇ ದಿನ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 201 ರನ್ ಕಲೆಹಾಕಿದರು. ಕೆಎಲ್ ರಾಹುಲ್ 77 ರನ್ ಗಳಿಸಿ ಔಟಾದರು.

ಯಶಸ್ವಿ ಜೈಸ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 297 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 161 ರನ್ ಗಳಿಸಿ ಮಿಂಚಿದರು. ದೇವದತ್ ಪಡಿಕ್ಕಲ್ 25 ರನ್ ಗಳಿಸಿದರು. ರಿಷಬ್ ಪಂತ್ 1 ರನ್ ಗಳಿಸಿದರೆ, ಧ್ರುವ್ ಜುರೆಲ್ 1 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 29 ರನ್ ಗಳಿಸಿದರು. ಕೊನೆಯಲ್ಲಿ ಮಿಂಚಿದ ನಿತೀಶ್ ರೆಡ್ಡಿ 27 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 38 ರನ್ ಗಳಿಸಿದರು.
ವಿರಾಟ್ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಮತ್ತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸುವ ಮೂಲಕ ಅಬ್ಬರಿಸಿದರು. ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಅವರು ಬಳಿಕ ವೇಗವಾಗಿ ರನ್ ಗಳಿಸಲು ಆರಂಭಿಸಿದರು. 143 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿದರು. ಕೊಹ್ಲಿ ಶತಕ ಗಳಿಸುತ್ತಿದ್ದಂತೆ ಭಾರತ ಡಿಕ್ಲೇರ್ ಮಾಡಿಕೊಂಡಿತು. 6 ವಿಕೆಟ್ ಕಳೆದುಕೊಂಡು 487 ರನ್ ಕಲೆಹಾಕಿದ್ದಾಗ ಡಿಕ್ಲೇರ್ ಮಾಡಿಕೊಂಡ ಭಾರತ ಆಸ್ಟ್ರೇಲಿಯಾಗೆ 534 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಆಸ್ಟ್ರೇಲಿಯಾಗೆ ಬುಮ್ರಾ, ಸಿರಾಜ್ ಶಾಕ್
ಈ ಬೃಹತ್ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾಗೆ ಮೊದಲ ಓವರ್ ನಲ್ಲೇ ಬುಮ್ರಾ ಶಾಕ್ ಕೊಟ್ಟರು. ನಾಥನ್ ಮೆಕ್‌ಸ್ವೀನಿ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಪಾಟ್ ಕಮ್ಮಿನ್ಸ್ ಸಿರಾಜ್ ಎಸೆತದಲ್ಲಿ ಔಟಾದರು. ಮಾರ್ನಸ್ ಲಾಬುಶಾನೆ 3 ರನ್ ಗಳಿಸಿದ್ದಾಗ ಬುಮ್ರಾ ಎಸೆತಗದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ 12 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿದೆ.












Click it and Unblock the Notifications