Duleep Trophy: ಮಯಾಂಕ್ ಪಡೆಗೆ ಭರ್ಜರಿ ಗೆಲುವು; ದುಲೀಪ್ ಟ್ರೋಫಿ ಅಂಕಪಟ್ಟಿ
ದುಲೀಪ್ ಟ್ರೋಫಿ ಪಂದ್ಯಾವಳಿಯ ಎರಡನೇ ಸುತ್ತಿನ ಪಂದ್ಯಗಳು ಮುಕ್ತಾಯವಾಗಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಭಾರತ ಎ ತಂಡವು ಭಾರತ ಡಿ ತಂಡದ ವಿರುದ್ಧ 186 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ಸಿ ಮತ್ತು ಭಾರತ ಬಿ ತಂಡದ ನಡುವಿನ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಅಂಕಪಟ್ಟಿಯಲ್ಲಿ ಭಾರತ ಸಿ ತಂಡ ಮೊದಲ ಸ್ಥಾನದಲ್ಲಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ಬಿ ತಂಡದ ವಿರುದ್ಧ 76 ರನ್‌ಗಳಿಂದ ಸೋಲನುಭವಿಸಿದ್ದ ಭಾರತ ಎ ತಂಡ ಎರಡನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಹಲವು ಪ್ರಮುಖ ಆಟಗಾರರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಹೋದ ಬಳಿಕವೂ, ಭಾರತ ಎ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಭಾರತ ಡಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್ ಆಯಿತು. ಶಂಸ್ ಮುಲಾನಿ 89 ರನ್ ಗಳಿಸಿದರೆ, ತನುಷ್ ಕೊಟ್ಯಾನ್ 53 ರನ್ ಗಳಿಸಿ ಗಮನ ಸೆಳೆದರು. ಭಾರತ ಡಿ ತಂಡದ ಬೌಲರ್ ಗಳಾದ ಹರ್ಷಿತ್ ರಾಣಾ 4 ವಿಕೆಟ್ ಪಡೆದರು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಡಿ 183 ರನ್‌ಗಳಿಗೆ ಆಲೌಟ್ ಆಯಿತು. ದೇವದತ್ ಪಡಿಕ್ಕಲ್ 92 ರನ್ ಗಳಿಸಿದರೆ, ಹರ್ಷಿತ್ ರಾಣಾ 31 ರನ್ ಗಳಿಸಿದರು. ಖಲೀಲ್ ಅಹ್ಮದ್, ಆಕಿಬ್ ಖಾನ್ ತಲಾ 3 ವಿಕೆಟ್ ಪಡೆದರು.
107 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 3 ವಿಕೆಟ್ ನಷ್ಟಕ್ಕೆ 380 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರಥಮ್ ಸಿಂಗ್ 122 ರನ್, ತಿಲಕ್ ವರ್ಮಾ 111 ರನ್ ಗಳಿಸುವ ಮೂಲಕ ಮಿಂಚಿದರು. ನಾಯಕ ಮಯಾಂಕ್ ಅಗರ್ವಾಲ್ ಕೂಡ 56 ರನ್ ಗಳಿಸಿದರು. ಶಶಾಂತ್ ರಾವತ್ 64 ರನ್ ಗಳಿಸಿದರು. ಒಟ್ಟಾರೆ 487 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡ ಭಾರತ ಎ 488 ರನ್‌ಗಳ ಬೃಹತ್ ಗುರಿ ನೀಡಿತು.
488 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ಡಿ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 301 ರನ್‌ಗಳಿಗೆ ಆಲೌಟ್ ಆಗುವ ಮೂಲಕ 186 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತನುಷ್ ಕೊಟ್ಯಾನ್ 4 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು. ಶಂಸ್ ಮುಲಾನಿ 3 ವಿಕೆಟ್ ಪಡೆದರು.
ದುಲೀಪ್ ಟ್ರೋಫಿಯ ಭಾರತ ಬಿ ಮತ್ತು ಭಾರತ ಸಿ ತಂಡಗಳ ನಡುವಿನ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಟಾಸ್ ಗೆದ್ದ ಭಾರತ ಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 525 ರನ್‌ಗಳಿಗೆ ಆಲೌಟ್ ಆಯಿತು. ಇಶಾನ್ ಕಿಶನ್ 111 ರನ್ ಗಳಿಸಿದರು. ಭಾರತ ಬಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 332 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಅಭಿಮನ್ಯು ಈಶ್ವರನ್ 157 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿದ್ದ ಭಾರತ ಸಿ ತಂಡ ಡಿಕ್ಲೇರ್ ಮಾಡಿಕೊಂಡಿತು. ಕೊನೆಯ ದಿನದ ಪಂದ್ಯವಾಗಿದ್ದ ಕಾರಣ, ಎರಡೂ ತಂಡಗಳ ನಾಯಕರ ಒಪ್ಪಿಗೆಯ ಮೇರೆಗೆ ಡ್ರಾ ಎಂದು ಘೋಷಣೆ ಮಾಡಲಾಯಿತು.












Click it and Unblock the Notifications