Ind vs NZ: ಜಡೇಜಾ-ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್; 235 ರನ್‌ಗಳಿಗೆ ನ್ಯೂಜಿಲೆಂಡ್ ಆಲೌಟ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಸದ್ಯ ಭಾರತ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದೆ. ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅಮೋಘ ಬೌಲಿಂಗ್ ಮಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
ಮೊದಲ ಎರಡು ಪಂದ್ಯಗಳನ್ನು ಸೋತಿರುವ ಭಾರತ ಈಗಾಗಲೇ ಸರಣಿಯನ್ನು ಕಳೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯದಲ್ಲಿ ಗೆಲ್ಲುವುದು ಬಹಳ ಮುಖ್ಯವಾಗಿದೆ. ಮೂರನೇ ಟೆಸ್ಟ್‌ಗಾಗಿ ಭಾರತ ತಂಡದಲ್ಲಿ ಪ್ರಮುಖವಾಗಿ ಒಂದು ಬದಲಾವಣೆ ಮಾಡಲಾಗಿತ್ತು. ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಆಕಾಶ್ ದೀಪ್ ಅವಕಾಶ ಪಡೆದುಕೊಂಡಿದ್ದಾರೆ.

ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಆಕಾಶ್ ದೀಪ್ ಆಘಾತ ನೀಡಿದರು. ಡಿವೋನ್ ಕಾನ್ವೆ 4 ರನ್ ಗಳಿಸಿದ್ದಾಗ ಆಕಾಶ್ ದೀಪ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಬಳಿಕ ಭಾರತದ ಸ್ಪಿನ್ ಜೋಡಿ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜೋಡಿ ನ್ಯೂಜಿಲೆಂಡ್ ತಂಡಕ್ಕೆ ಮಾರಕವಾದರು.
ರವೀಂದ್ರ ಜಡೇಜಾ 5 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಮಿಂಚಿದರು. ಇವರಿಬ್ಬರ ಮಾರಕ ಬೌಲಿಂಗ್ ನೆರವಿನಿಂದ ಮೊದಲ ದಿನವೇ ನ್ಯೂಜಿಲೆಂಡ್ ಆಲೌಟ್ ಆಗಿದೆ. ಇದೀಗ ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲಿದ್ದು, ಈ ಪಂದ್ಯ ಗೆಲ್ಲಬೇಕಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿ ಇನ್ನಿಂಗ್ಸ್ ಮುನ್ನಡೆ ಪಡೆಯಬೇಕಿದೆ.
ಯಂಗ್, ಮಿಚೆಲ್ ಆಸರೆ
ನ್ಯೂಜಿಲೆಂಡ್ ತಂಡಕ್ಕೆ ವಿಲ್ ಯಂಗ್ ಮತ್ತು ಡೇರಿಲ್ ಮಿಚೆಲ್ ಆಸರೆಯಾದರು. ಎಲ್ಲಾ ಬ್ಯಾಟರ್ ಗಳು ರನ್ ಗಳಿಸಲು ಪರದಾಡುತ್ತಿದ್ದರೆ, ಈ ಇಬ್ಬರು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ್ದಲ್ಲದೆ ಅರ್ಧಶತಕ ಗಳಿಸಿದರು. ವಿಲ್ ಯಂಗ್ 71 ರನ್ ಗಳಿಸಿದರೆ, ಡೇರಿಲ್ ಮಿಚೆಲ್ 82 ರನ್ ಗಳಿಸಿದರು. ಉಳಿದಂತೆ ನಾಯಕ ಟಾಮ್ ಲಾಥಮ್ 28 ರನ್, ಗ್ಲೆನ್ ಫಿಲಿಪ್ಸ್ 17 ರನ್ ಗಳಿಸಿದರು.
ಭಾರತಕ್ಕೆ ಬ್ಯಾಟಿಂಗ್ ಸವಾಲು
ಸ್ಪಿನ್‌ಗೆ ಪಿಚ್ ನೆರವು ನೀಡುತ್ತಿದ್ದು ಭಾರತ ತಂಡದ ಆಟಗಾರರಿಗೆ ಕೂಡ ಇಲ್ಲಿ ಬ್ಯಾಟಿಂಗ್ ಸವಾಲಾಗಿದೆ. ಭಾರತ ಸ್ವಲ್ಪ ಯಾಮಾರಿದರೂ ಈ ಪಂದ್ಯವನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆ ಇದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದರೆ ಮಾತ್ರ ಈ ಪಂದ್ಯವನ್ನು ಗೆಲ್ಲುವ ಯೋಚನೆ ಮಾಡಬಹುದಾಗಿದೆ. ಎರಡನೇ ಪಂದ್ಯದಲ್ಲಿ ಭಾರತಕ್ಕೆ ಮುಳುವಾಗಿದ್ದ ಮಿಚೆಲ್ ಸ್ಯಾಂಟ್ನರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು ಮತ್ತೊಬ್ಬ ಸ್ಪಿನ್ನರ್ ಇಶ್ ಸೋಧಿ ಕಣಕ್ಕಿಳಿದಿದ್ದಾರೆ.












Click it and Unblock the Notifications