IND VS ENG: ಕ್ರಿಕೆಟ್ ಕಲಿಸಿಕೊಟ್ಟವರಿಗೆ ಆಟದ ಪಾಠ ಮಾಡಿದ ಭಾರತೀಯರು!
ಕ್ರಿಕೆಟ್ ಜಗತ್ತು ಇಂದು ಮತ್ತೆ ತಲ್ಲಣಗೊಂಡಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಮನೆದಾರಿ ಹಿಡಿಯುವುದು ಬಹುತೇಕ ಪಕ್ಕಾ ಆಗಿದೆ. ಈ ಮ್ಯಾಚ್‌ನಲ್ಲಿ ಭಾರತದ ಬೌಲಿಂಗ್ ದಾಳಿ ಕಂಡು ಆಂಗ್ಲರ ಪಡೆ ತತ್ತರಿಸಿದ್ದು, ಕನಿಷ್ಠ 150 ರನ್ ಗಳಿಸುವುದಕ್ಕೂ ಒದ್ದಾಡಿತು. ಹೀಗೆ ಭಾರತ ಕ್ರಿಕೆಟ್ ತಂಡ, 100 ರನ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಭಾರತ & ಇಂಗ್ಲೆಂಡ್ ಪಂದ್ಯದ ಇಂಚಿಂಚು ಮಾಹಿತಿ ಇಲ್ಲಿದೆ.
ಲಖನೌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭದಲ್ಲೇ ಹಲವು ಆಘಾತಗಳು ಎದುರಾದವು. ಆದರೆ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್. ರಾಹುಲ್ ಬಲದಿಂದ ಸವಾಲಿನ ಮೊತ್ತಕ್ಕೆ ಬಂದು ತಲುಪಿತ್ತು ನಮ್ಮ ಹೆಮ್ಮೆಯ ಭಾರತ. ಇನ್ನು ಈ ಬೌಲಿಂಗ್ ಪಿಚ್‌ನಲ್ಲಿ, ಭಾರತದ ಆಟಗಾರರು ಆಂಗ್ಲರ ಬೌಲಿಂಗ್ ಅಟ್ಯಾಕ್ ಎದುರಿಸಿ 229ರನ್ ಗಳಿಸುವಲ್ಲಿ ಯಶಸ್ವಿ ಕೂಡ ಆದರು. ಆದರೆ ಈ ಪಂದ್ಯ ಸುಲಭವಾಗಿ ಗೆಲ್ಲಬಹುದು ಅಂದುಕೊಂಡ ಇಂಗ್ಲೆಂಡ್ ಪಡೆಗೆ 2ನೇ ಇನ್ನಿಂಗ್ಸ್ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಹೀನಾಯ ಸೋಲು. ಅದ್ರಲ್ಲೂ 2003 ರಲ್ಲಿ ಕಂಡಿದ್ದ ಸೋಲಿಗಿಂತ ಹೀನಾಯ ಸೋಲು ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದೆ.

ಆಂಗ್ಲರ ಪರ ಯಾರೂ 30 ರನ್ ಮುಟ್ಟಲಿಲ್ಲ!
ಇನ್ನು 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಆಂಗ್ಲರ ಪಡೆಗೆ 30 ರನ್ ಗಳಿಸಿದ್ದಾಗ ಮೊದಲನೇ ಶಾಕ್ ಸಿಕ್ಕಿತ್ತು. ಅಲ್ಲಿಂದ ಮುಂದಕ್ಕೆ, ಪಟಪಟನೆ ವಿಕೆಟ್ ಬಿದ್ದು ಹೋದವು. ಅದರಲ್ಲೂ ಜೋ ರೂಟ್ & ಬೆನ್ ಸ್ಟೋಕ್ಸ್ ಹೋದ ಪುಟ್ಟ.. ಬಂದ ಪುಟ್ಟ.. ಎಂಬಂತೆ ಆಟ ಆಡಿದರು. ಹೀಗೆ ಇಂಗ್ಲೆಂಡ್ ತಂಡದ ಸ್ಕೋರ್ ಬೋರ್ಡ್, ಒಳ್ಳೆ ಲ್ಯಾಂಡಲ್‌ಲೈನ್ ಫೋನ್ ನಂಬರ್ ರೀತಿ ಇತ್ತು. ಹಾಗಾದರೆ ಇಂಗ್ಲೆಂಡ್ ತಂಡದ ಮೊದಲ ಆಟಗಾರನಿಂದ, ಕೊನೆಯ ಆಟಗಾರನ ತನಕ ರನ್ ಗಳಿಕೆ ನೋಡೋದಾದ್ರೆ, 14, 16, 0, 0, 10, 15, 27, 10, 16, 13, 0 ಆಗಿತ್ತು. 3 ಇಂಗ್ಲೆಂಡ್ ಆಟಗಾರರು ಡಕ್ ಔಟ್ ಆಗಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಗೆಲ್ಲಲು ಬಂದು ಸೋತ ಆಂಗ್ಲರು!
ಒಟ್ನಲ್ಲಿ 2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವಿಜಯ ಯಾತ್ರೆಯು ಹೀಗೆ ಮುಂದುವರಿದಿದೆ. ಭಾರತ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ರೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 100 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಮೊದ್ಲು ಬ್ಯಾಟ್ ಮಾಡಿದ್ದ ಭಾರತ 50 ಓವರ್‌ನಲ್ಲಿ 229 ರನ್ ಗಳಿಸಿತ್ತು, ಆದರೆ 230 ರನ್‌ಗಳ ಗುರಿಯ ಬೆನ್ನುಹತ್ತಿದ್ದ ಆಂಗ್ಲರ ಪಡೆ ಅಂದರೆ, ಇಂಗ್ಲೆಂಡ್ ತಂಡ ಕೇವಲ 129 ರನ್‌ಗಳಿಗೆ ಅಡ್ಡಡ್ಡ & ಉದ್ದುದ್ದ ಲಖನೌ ಮೈದಾನದಲ್ಲೇ ಮಲಗಿಬಿಟ್ಟಿದೆ!

ಈ ಮೂಲಕ ಭಾರತ ಕ್ರಿಕೆಟ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮುಂದಿನ ಹಂತಕ್ಕೆ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಸತತವಾಗಿ 6 ಗೆಲುವು ಕಂಡಿರುವ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಜ್ಜಾಗಿದೆ. ಇನ್ನು 3 ಪಂದ್ಯವನ್ನು ಭಾರತ ಆಡಲಿದ್ದು, ಈ ಮ್ಯಾಚ್‌ಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಲಿದೆ. ಆದ್ರೆ ಭಾರತ ವಿಶ್ವಕಪ್ ಅಂಕಪಟ್ಟಿಯಲ್ಲಿ ಟಾಪ್ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಲು ಈಗ ರಣಕಹಳೆ ಮೊಳಗಿಸಿದೆ. ಮುಂದಿನ ಮೂರು ಪಂದ್ಯದಲ್ಲೂ ಇದೇ ರೀತಿಯಾಗಿ ಭಾರಿ ಅಂತರದ ಗೆಲುವು ಸಾಧಿಸಲು ರೋಹಿತ್ ಶರ್ಮಾ ನೇತೃತ್ವದ ಪಡೆ ಸನ್ನದ್ಧವಾಗಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಿದೆ.












Click it and Unblock the Notifications