Video: ಟಿ-20 ಪಂದ್ಯದಲ್ಲಿ ಪಾಕಿಸ್ತಾನದ ಗೆಲುವನ್ನು "ಇಸ್ಲಾಂ ವಿಜಯ" ಎಂದ ಸಚಿವ ಶೇಖ್ ರಶೀದ್
ಇಸ್ಲಮಾಬಾದ್, ಅಕ್ಟೋಬರ್ 25: ಐಸಿಸಿ ವಿಶ್ವಕಪ್ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧದ ಪಾಕಿಸ್ತಾನದ ಗೆಲುವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಸಚಿವ ಆಂತರಿಕ ಸಚಿವ ಶೇಖ್ ರಶೀದ್ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡಿದೆ.
"ಭಾರತದ ವಿರುದ್ಧ ರಾಷ್ಟ್ರದ ಗೆಲುವು 'ಇಸ್ಲಾಂನ ವಿಜಯ' ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿದ ಬೆನ್ನಲ್ಲೇ ಸಚಿವ ರಶೀದ್ ಈ ರೀತಿ ಹೇಳಿಕೆ ನೀಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳುವಂತೆ ಭಾರತದಲ್ಲಿ ಮುಸ್ಲಿಮರು ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಮರು ಪಂದ್ಯದ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರು. "ಪಾಕಿಸ್ತಾನಕ್ಕೆ, ಇಂದಿನ ಭಾರತ-ಪಾಕಿಸ್ತಾನ ಪಂದ್ಯವೇ ಅಂತಿಮ" ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ:
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಪಂದ್ಯ ನಡೆಯಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿತು. ಪಾಕಿಸ್ತಾನದ ಬೌಲರ್ಸ್ ಮಾರಕ ದಾಳಿಗೆ ಆರಂಭದಲ್ಲೇ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ವಿಕೆಟ್ ಅಂತ್ಯಕ್ಕೆ ಮೈದಾನಕ್ಕೆ ಇಳಿದ ನಾಯಕ ವಿರಾಟ್ ಕೊಹ್ಲಿ ತಾಳ್ಮೆಯ ಪ್ರದರ್ಶನ ನೀಡಿದರು. ವಿರಾಟ್ ಜೊತೆಗೆ ರಿಷಬ್ ಪಂತ್ ಸಹ ಉತ್ತಮವಾಗಿ ಬ್ಯಾಟ್ ಬೀಸಿದರು ಆದರೆ 39 ರನ್ ಗಳಿಸಿದ ಅವರು ಸಿಕ್ಸ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ಕೊನೆಯ ಹಂತದವರೆಗೂ ಪಂದ್ಯವನ್ನು ಮುನ್ನೆಡೆಸಲು ನಿಂತಿದ್ದ ವಿರಾಟ್ ಕೊಹ್ಲಿ ಕೂಡ 57 ರನ್ ಗಳಿಸಿ ಔಟ್ ಆದರು. ಟೀಂ ಇಂಡಿಯಾ ನಾಯಕನ ಉತ್ತಮ ಪ್ರದರ್ಶನದಿಂದಾಗಿ ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
پاکستان انڈیا میچ ٹکرا:
— Sheikh Rashid Ahmed (@ShkhRasheed) October 24, 2021
پاکستانی کرکٹ ٹیم اور عوام کو مبارکباد پیش کرتا ہوں.https://t.co/Tc0IG0n2DJ@GovtofPakistan @ImranKhanPTI #PakvsIndia pic.twitter.com/e9RkffrK2O
ಪಾಕಿಸ್ತಾನಕ್ಕೆ ವರವಾದ ಬೌಲಿಂಗ್ ವೈಫಲ್ಯ:
ಟೀಂ ಇಂಡಿಯಾ ನೀಡಿದ 152 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಇಂಡಿಯನ್ ಬೌಲರ್ಸ್ ವೈಫಲ್ಯ ವರದಾನವಾದಂತೆ ತೋರಿತು. ಪಾಕಿಸ್ತಾನದ ಪರ ಉತ್ತಮವಾಗಿ ಆಟವಾಡಿದ ರಿಜ್ವಾನ್ 3 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 79 ರನ್ ಗಳಿಸಿದರು. ಇನ್ನೊಂದು ಕಡೆಯಲ್ಲಿ ಬಾಬರ್ ಕೂಡ 52 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸೇರಿದಂತೆ 68 ರನ್ ಗಳಿಸಿದರು. ಪಾಕಿಸ್ತಾನದ ಪರ ಶಾಹಿನ್ ಅಫ್ರಿದಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್ ತೆಗೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಪಾಕಿಸ್ತಾನ ಆಟಗಾರರ ಬಗ್ಗೆ ಮೆಚ್ಚುಗೆ ಮಾತು:
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಟಿ-20 ಪಂದ್ಯದ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಎರಡು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ "ಪಾಕಿಸ್ತಾನದ ಗೆಲುವು ಅದು ಇಸ್ಲಾಂನ ವಿಜಯ" ಎಂದು ಹೇಳಿಕೆ ನೀಡಿದ್ದಾರೆ. ಅದೇ ರೀತಿ ಇನ್ನೊಂದು ವಿಡಿಯೋದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಜ್ವಾನ್ ಮತ್ತು ಬಾಬರ್ ಹಾಗೂ ಶಾಹಿನ್ ಅಫ್ರಿದಿ ಪರವಾಗಿ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.












Click it and Unblock the Notifications