ICC Ranking: ಐಸಿಸಿ ರ‍್ಯಾಂಕಿಂಗ್ ಪಟ್ಟಿಯ ಬೌಲಿಂಗ್ & ಬ್ಯಾಟಿಂಗ್ ಅಖಾಡದಲ್ಲಿ ಭಾರತೀಯರದ್ದೇ ಹವಾ!
ಭಾರತ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಅಖಾಡದಲ್ಲಿ ಅಬ್ಬರಿಸಿದ್ದು ಈಗಾಗಲೇ ಸೆಮಿಫೈನಲ್ ತಲುಪಿದೆ. ಈಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಭಾರತೀಯ ಆಟಗಾರರು ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗಾದರೆ ಐಸಿಸಿಯ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಯಾವ ಯಾವ ಆಟಗಾರರು ಯಾವ ಸ್ಥಾನದಲ್ಲಿ ಇದ್ದಾರೆ?
ಐಸಿಸಿ ಏಕದಿನ ವಿಶ್ವಕಪ್-2023 ಭಾರತದಲ್ಲೇ ನಡೆದು, ಭಾರತ ನೇತೃತ್ವದಲ್ಲಿ ಝಗಮಗಿಸಿ ಜಗತ್ತನ್ನೇ ಸೆಳೆಯುತ್ತಿದೆ. ಹೀಗಿದ್ದಾಗ ಭಾರತದ ಕ್ರಿಕೆಟ್ ಆಟಗಾರರು ಸುಮ್ಮನೆ ಇರೋದಕ್ಕೆ ಆಗುತ್ತಾ ಹೇಳಿ? ಇದೇ ಕಾರಣಕ್ಕೆ ಭಾರತದ ಕ್ರಿಕೆಟ್ ತಂಡ ಕೂಡ, ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯಲ್ಲಿ ಅಬ್ಬರಿಸುತ್ತಿದೆ. ಈವರೆಗೂ 8 ಮ್ಯಾಚ್ ಆಡಿದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ, ಒಂದೇ ಒಂದು ಪಂದ್ಯ ಸೋತಿಲ್ಲ. ಅದ್ರಲ್ಲೂ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ರೋಹಿತ್ ಶರ್ಮಾ ದಾಖಲೆ ಮೇಲೆ ದಾಖಲೆ ಬರೆದು ಗಮನ ಸೆಳೆಯುತ್ತಿದ್ದಾರೆ. ಹೀಗಿದ್ದಾಗ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಈ ಇತಿಹಾಸ ನಿರ್ಮಿಸಿದೆ!

ಇತಿಹಾಸ ನಿರ್ಮಿಸಿದ ಭಾರತ ತಂಡ!
ಐಸಿಸಿಯ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಭಾರತದ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಒಟ್ಟಿಗೆ ನಂಬರ್ 1 ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಎಂದಿಗೂ ಇಂತಹ ಸಾಧನೆಯನ್ನ ಭಾರತ ಮಾಡಿಲ್ಲ. ಹಾಗಾದರೆ ಭಾರತ ಯಾವ ಬ್ಯಾಟ್ಸ್‌ಮನ್ ಈಗ ನಂಬರ್ 1 ಸ್ಥಾನ ಪಡೆದಿದ್ದಾರೆ? ಅಲ್ಲದೆ ಯಾವ ಬೌಲರ್‌ಗೆ ಕ್ರಿಕೆಟ್ ಜಗತ್ತಿನ ನಂಬರ್ 1 ಸ್ಥಾನ ಸಿಕ್ಕಿದೆ? ಬನ್ನಿ ತಿಳಿಯೋಣ.
ಯಾರಿಗೆ ಸಿಕ್ಕಿದೆ ನಂ. 1 ಬ್ಯಾಟ್ಸ್‌ಮನ್ ಪಟ್ಟ?
ಅಂದಹಾಗೆ ಇದೀಗ ಐಸಿಸಿ ಬಿಡುಗಡೆ ಮಾಡಿರುವ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಶುಭಮನ್ ಗಿಲ್ ನಂ. 1 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಶುಭಮನ್ ಗಿಲ್ ಈಗ ಭರ್ಜರಿ 830 ಅಂಕಗಳನ್ನು ಗಳಿಸುವ ಮೂಲಕ ಮೊದಲನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದು, ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾರೆ. 824 ಅಂಕ ಪಡೆದು ಬಾಬರ್ ಅಜಮ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ದಕ್ಷಿಣ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ 771 ಅಂಕ ಗಳಿಸಿ 3ನೇ ಸ್ಥಾನ ಪಡೆದಿದ್ದಾರೆ. ಹಾಗೇ ಈ ಬಾರಿಯ, ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬೌಲಿಂಗ್ ವಿಭಾಗದಲ್ಲಿ ಭಾರತದ ಆಟಗಾರ ಸಾಧನೆ ಮಾಡಿದ್ದಾರೆ. ಅರೆ ಯಾರು ಆ ಆಟಗಾರ? ಮುಂದೆ ಓದಿ.

ನಂ. 1 ಬೌಲರ್ ಯಾರು ಗೊತ್ತಾ?
ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಿಂದಲೂ ಅಬ್ಬರಿಸುತ್ತಿದೆ. ಅದರಲ್ಲೂ ಭಾರತದ ಬೌಲಿಂಗ್ ವಿಭಾಗ ನೋಡಿದರೆ ಅದೆಂತಹ ತಂಡವೇ ಆಗಿರಲಿ, ಭಯದಲ್ಲಿ ನಲುಗಿ ಹೋಗುತ್ತದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅಬ್ಬರಿಸಿದ್ರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಗೂಡು ಸೇರುತ್ತಾರೆ. ಹೀಗಾಗಿ ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ ಈಗ ಏಕದಿನ ಕ್ರಿಕೆಟ್ ಜಗತ್ತಿನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ. 709 ಅಂಕ ಪಡೆದ ಮೊಹಮ್ಮದ್ ಸಿರಾಜ್ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಭಾರತದ ಇನ್ನೂ 3 ಬೌಲರ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 10 ಸ್ಥಾನ ಪಡೆದಿದ್ದಾರೆ, ಯಾರು ಗೊತ್ತಾ?
ಭಾರತದ ಮೊಹಮ್ಮದ್ ಸಿರಾಜ್ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ, ಬೌಲಿಂಗ್ ವಿಭಾಗದಲ್ಲಿ ನಂ. 1 ಆಗಿದ್ದರೆ, ಭಾರತದ ಮತ್ತೊಬ್ಬ ಆಟಗಾರ ಕುಲ್ದೀಪ್ ಯಾದವ್ 661 ಅಂಕ ಗಳಿಸಿ 4ನೇ ಸ್ಥಾನ ಪಡೆದಿದ್ದಾರೆ. ಹಾಗೇ 654 ಅಂಕ ಪಡೆದಿರುವ ಜಸ್ಪ್ರೀತ್ ಬುಮ್ರಾ 8ನೇ ಸ್ಥಾನಕ್ಕೆ ಹಾಗೂ 635 ಅಂಕ ಗಳಿಸಿರುವ ಮೊಹಮ್ಮದ್ ಶಮಿ 10ನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆ ಅಲ್ಲ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 770 ಅಂಕ ಗಳಿಸಿ 4ನೇ ಸ್ಥಾನದಲ್ಲಿ ಇದ್ದರೆ, ರೋಹಿತ್ ಶರ್ಮಾ 739 ಅಂಕ ಗಳಿಸಿ 6ನೇ ಸ್ಥಾನ ಪಡೆದು ಐಸಿಸಿ ರ‍್ಯಾಂಕಿಂಗ್‌ನ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ.












Click it and Unblock the Notifications