ICC ODI World Cup 2023: ಟಿಕೆಟ್ ಮಾರಾಟ ಯಾವಾಗ? ದರ ಎಷ್ಟು ತಿಳಿಯಿರಿ
ಏಕದಿನ ವಿಶ್ವಕಪ್ 2023ರ ಬಹುನಿರೀಕ್ಷಿತ ವೇಳಾಪಟ್ಟಿ ಜೂನ್ 27ರಂದು ಬಿಡುಗಡೆಯಾಗಿದೆ. ವೇಳಾಪಟ್ಟಿ ಬಿಡುಗಡೆಯಾದ ದಿನದಿಂದ ಸರಿಯಾಗಿ 100 ದಿನಗಳ ನಂತರ ಅಕ್ಟೋಬರ್ 5ರಂದು ಪಂದ್ಯಾವಳಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯವನ್ನು ಆಡಲಿವೆ.
ಭಾರತದ 10 ನಗರಗಳ ಕ್ರೀಡಾಂಗಣದಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ನವೆಂಬರ್ 19 ರಂದು ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ. ಇನ್ನು ಮಹತ್ವದ ಪಂದ್ಯಗಳಿಗೆ ಟಿಕೆಟ್ ಮಾರಾಟ ಯಾವಾಗ ಶುರುವಾಗಲಿದೆ, ಬೆಲೆ ಎಷ್ಟು, ಅಡ್ವಾನ್ಸ್ ಬುಕಿಂಗ್ ಯಾವಾಗ ಎನ್ನುವ ಕಾತರ ಶುರುವಾಗಿದೆ.

ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಇಡೀ ಕ್ರಿಕೆಟ್ ಜಗ್ಗತು ಕುತೂಹಲದಿಂದ ಕಾಯುತ್ತಿದೆ. ಈ ಪಂದ್ಯಕ್ಕಾಗಿ ಟಿಕೆಟ್ ಪಡೆಯಲು ಭಾರಿ ಸ್ಪರ್ಧೆ ಉಂಟಾಗಲಿದೆ. ಈಗಾಗಲೇ ಅಹಮದಾಬಾದ್‌ನಲ್ಲಿ ಪಂದ್ಯದ ದಿನ ಹೋಟೆಲ್ ರೂಂ ಬುಕಿಂಗ್ ಶುರುವಾಗಿದೆ, ಕೆಲವು ಐಷಾರಾಮಿ ಹೋಟೆಲ್‌ಗಳ ಕೊಠಡಿ ದರ 10 ಪಟ್ಟು ಹೆಚ್ಚಾಗಿದೆ.
ಟಿಕೆಟ್ ಬುಕಿಂಗ್ ಯಾವಾಗ?
ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ ಐಸಿಸಿ ವಿಶ್ವಕಪ್ 2023 ರ ಟಿಕೆಟ್‌ಗಳು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಪ್ರಪಂಚದಾದ್ಯಂತದ ಕ್ರಿಕೆಟ್ ಉತ್ಸಾಹಿಗಳು ಮತ್ತು ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಅಧಿಕೃತ ಐಸಿಸಿ ಕ್ರಿಕೆಟ್ ವಿಶ್ವಕಪ್ ವೆಬ್‌ಸೈಟ್‌ನಿಂದ ಮುಂಗಡ ಬುಕ್ ಮಾಡಬಹುದು.
ಜುಲೈ ಮೊದಲ ವಾರದಲ್ಲಿ ಟಿಕೆಟ್ ಮಾರಾಟ ಆರಂಭವಾಗುವ ಸಾಧ್ಯತೆ ಇದೆ. ಬುಕ್‌ಮೈಶೋ, ಪೇಟಿಎಂ, ಪೇಟಿಎಂ ಇನ್‌ಸೈಡರ್‌ಗಳಲ್ಲಿಯೂ ಟಿಕೆಟ್‌ಗಳು ಲಭ್ಯವಿರುತ್ತವೆ. ಟಿಕೆಟ್‌ಗಳು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ ಮತ್ತು ಸೀಮಿತ ಆಫ್‌ಲೈನ್ ಮಾರಾಟವನ್ನು ಹೊಂದಿರುತ್ತವೆ. ಟಿಕೆಟ್‌ಗಳ ದರವು ಪ್ರತಿ ಟಿಕೆಟ್‌ಗೆ ರೂ 500 ರಿಂದ ರೂ 10,000 ರ ನಡುವೆ ಇರುತ್ತದೆ. ಬೆಲೆಗಳು ಸ್ಥಳ ಮತ್ತು ಪಂದ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗಿದೆ.
ಭಾರತದ ಏಕದಿನ ವಿಶ್ವಕಪ್ ವೇಳಾಪಟ್ಟಿ
ರೋಹಿತ್ ಶರ್ಮಾ ನೇತೃತ್ವದ ಭಾರತವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ 2023 ರ ಏಕದಿನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 11 ರಂದು ಆಫ್ಘಾನಿಸ್ತಾನದ ವಿರುದ್ಧ ಸೆಣೆಸಲಿದ್ದು ಈ ಪಂದ್ಯ ದೆಹಲಿಯಲ್ಲಿ ನಡೆಯಲಿದೆ.
ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.
ಅಕ್ಟೋಬರ್ 29ರಂದು ಲಕ್ನೋದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ. ನವೆಂಬರ್ 2ರಂದು ಮುಂಬೈನಲ್ಲಿ ಭಾರತ ಕ್ವಾಲಿಫೈಯರ್ 2 ತಂಡದ ಜೊತೆ ಸೆಣೆಸಲಿದೆ. ನವೆಂಬರ್ 5ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಏಕದಿನ ವಿಶ್ವಕಪ್‌ನ ಲೀಗ್ ಹಂತದ ಭಾರತ ತಂಡದ ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 1 ತಂಡದ ವಿರುದ್ಧ ಆಡಲಿದೆ.












Click it and Unblock the Notifications