Champions Trophy: ಚಾಂಪಿಯನ್ಸ್ ಟ್ರೋಫಿಗೆ ತಂಡ ಘೋಷಿಸಲು ಅಂತಿಮ ದಿನಾಂಕ ಯಾವಾಗ?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭಕ್ಕೆ ಇನ್ನು ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಫೆಬ್ರವರಿ 19ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಐಸಿಸಿ ಈಗಗಲೇ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುವುದು ಖಚಿತವಾಗಿದೆ. ವೇಳಾಪಟ್ಟಿ ಘೋಷಣೆಯಾದ ಬಳಿಕ ಇದೀಗ 8 ದೇಶಗಳು ತಮ್ಮ ತಂಡವನ್ನು ಆಯ್ಕೆ ಮಾಡಬೇಕಿದೆ.
ಈಗಾಗಲೇ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗಾಗಿ ತಂಡವನ್ನು ಪ್ರಕಟಿಸಿದೆ. ಉಳಿದ 7 ತಂಡಗಳು ಈಗ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ತಂಡಗಳನ್ನು ಆಯ್ಕೆ ಮಾಡಿ ಘೋಷಿಸಬೇಕಿದೆ. ಐಸಿಸಿ ನಿಯಮ ಮತ್ತು ನಿಬಂಧನೆಗಳ ಪ್ರಕಾರ ಪಂದ್ಯಾವಳಿ ಆರಂಭಕ್ಕೆ 5 ವಾರಗಳ ಮೊದಲು ತಾತ್ಕಾಲಿಕ ತಂಡವನ್ನು ಐಸಿಸಿಗೆ ಸಲ್ಲಿಸಬೇಕಾಗಿದೆ. ಫೆಬ್ರವರಿ 12 ಅಂತಿಮ ತಂಡವನ್ನು ಸಲ್ಲಿಸಲು ಕೊನೆಯ ದಿನವಾಗಿದೆ.

ಜನವರಿ 12ರಿಂದ 8 ದೇಶಗಳು ತಮ್ಮ ತಂಡವನ್ನು ಐಸಿಸಿಗೆ ಸಲ್ಲಿಸಬಹುದಾಗಿದೆ. ಫೆಬ್ರವರಿ 12ರವರೆಗೆ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ಆದರೆ ಫೆಬ್ರವರಿ 12ರಂದು ಅಂತಿಮ ತಂಡ ಪ್ರಕಟಿಸಿದ ಬಳಿಕ ತಂಡದಲ್ಲಿ ಬದಲಾವಣೆ ಮಾಡಲು ಐಸಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ.
ತಂಡಗಳನ್ನು ಸಲ್ಲಿಸಲು ನಿಯಮಗಳು
ಜನವರಿ 12ರಿಂದ ತಮ್ಮ ತಂಡಗಳನ್ನು ಸಲ್ಲಿಸಲು 8 ದೇಶಗಳಿಗೆ ಅವಕಾಶ ನೀಡಲಾಗುತ್ತದೆ.
ಅಂತಿಮ ತಂಡವನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 12 ಆಗಿದೆ.
ಜನವರಿ 12 ರಿಂದ ಫೆಬ್ರವರಿ 12 ರವರೆಗೆ, ಘೋಷಿಸಿದ ತಂಡಗಳಲ್ಲಿ ಎಷ್ಟು ಬೇಕಾದರೂ ಬದಲಾವಣೆ ಮಾಡಲು ಅವಕಾಶವಿರಯತ್ತದೆ.
ಫೆಬ್ರವರಿ 12 ರಿಂದ 19 ರವರೆಗೆ ಕೂಡ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ಆದರೆ ತಾಂತ್ರಿಕ ಸಮಿತಿಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಇಂಗ್ಲೆಂಡ್ ಈಗಾಗಲೇ ಚಾಂಪಿಯನ್ಸ್ ಟ್ರೋಫಿಗಾಗಿ ತಂಡವನ್ನು ಘೋಷಣೆ ಮಾಡಿದ್ದು ಜೋಸ್ ಬಟ್ಲರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಯುವ ಆಟಗಾರ ಜೇಕಬ್ ಬೆಥೆಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೆನ್ ಸ್ಟೋಕ್ಸ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಲ್ಲ. ಆದರೆ ಇದು ತಾತ್ಕಾಲಿಕ ತಂಡವಾಗಿದ್ದು ಬದಲಾವಣೆ ಮಾಡಲು ಅವಕಾಶವಿರುತ್ತದೆ. ಆಟಗಾರರು ಯಾರಾದರೂ ಗಾಯಗೊಂಡರೆ ಬದಲೀ ಆಟಗಾರರನ್ನು ಹೆಸರಿಸುವ ಸಾಧ್ಯತೆ ಇರುತ್ತದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಜೋ ರೂಟ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಮಾರ್ಕ್ ವುಡ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್.












Click it and Unblock the Notifications