ಚಾಂಪಿಯನ್ಸ್ ಟ್ರೋಫಿ ಸಂಭಾವ್ಯ ವೇಳಾಪಟ್ಟಿ ಪ್ರಕಟ: ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ?
2023ರ ಏಷ್ಯಾಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಲು ಭಾರತ ತಿರಸ್ಕರಿಸಿದ ಕಾರಣ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ಪಾಕಿಸ್ತಾನದಲ್ಲಿ ನಡೆಯಲಿದ್ದು, ಸಂಭಾವ್ಯ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2024-25ರ ಋತುವಿಗಾಗಿ ತವರಿನ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗಳನ್ನು ಆಡಲಿದ್ದು, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯಲಿದೆ.

ಅದಾದ ಬಳಿಕ 2025ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತದೆ. ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಿದೆ.
Pakistan Men's 2024-25 home international season unveiled! 🚨
— Pakistan Cricket (@TheRealPCB) July 5, 2024
More details ➡️ https://t.co/FkPqoQCP6G#PAKvBAN | #PAKvENG | #PAKvWI pic.twitter.com/BHrZp5xDvU
ಎಂಟು ತಂಡಗಳ ಹಣಾಹಣಿ
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾದಾಟ ನಡೆಸಲಿವೆ.
ಎಂಟು ತಂಡಗಳ ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ ಎಂದು ಪಿಸಿಬಿ ಹೇಳಿದೆ. ಪಂದ್ಯಗಳನ್ನು ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಆಯೋಜಿಸಲಾಗುತ್ತದೆ.
ಭಾರತವನ್ನು ಸ್ವಾಗತಿಸಲು ಲಾಹೋರ್ ಸಜ್ಜು!
ಲಾಹೋರ್‌ನ ಗಡಾಫಿ ಕ್ರೀಡಾಂಗಣವು ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಆಯೋಜನೆಗಾಗಿ ನವೀಕರಣಗೊಳ್ಳುತ್ತಿದೆ. ಈ ಕ್ರೀಡಾಂಗಣವು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಭಾವ್ಯ ಸೆಮಿಫೈನಲ್ ಘರ್ಷಣೆ ಸೇರಿದಂತೆ ಹೆಚ್ಚಿನ ಪ್ರಮುಖ ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆಯಿದೆ.
ಭದ್ರತೆಯ ದೃಷ್ಟಿಯಿಂದ ಭಾರತಕ್ಕೆ ಸಮೀಪದಲ್ಲಿರುವ ಲಾಹೋರ್ ನಲ್ಲಿ ಪಂದ್ಯಗಳನ್ನು ಆಯೋಜಿಸುವುದಿರಂದ ಟೀಂ ಇಂಡಿಯಾಗೆ ಸಹಾಯಕವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ?
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೇರ್ಪಡೆ ದೃಢಪಟ್ಟಿದ್ದರೂ, ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡುವ ಬಗ್ಗೆ ಇನ್ನು ಯಾವುದೇ ನಿಶ್ಚಯವಾಗಿಲ್ಲ. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಗಳು ಭಾರತ ತಂಡ ಪಾಕಿಸ್ತಾನಕ್ಕೆ ತೆರಳದಂತೆ ತಡೆಯುತ್ತಿವೆ.
ಬಿಸಿಸಿಐ ಸರ್ಕಾರದ ಸಲಹೆಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದೆ. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿದರೆ, ಏಷ್ಯಾಕಪ್‌ನಂತೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಕೇಳಬಹುದು. ಆದರೆ ಈ ಬಾರಿ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ.
ಭಾರತವು ಕೊನೆಯ ಬಾರಿಗೆ 2008 ರಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಯನ್ನು ಆಡಿತ್ತು. ಈ ಬಾರಿ ಏನಾದರೂ ಪಾಕಿಸ್ತಾನಕ್ಕೆ ಭಾರತ ತಂಡ ತೆರಳಿದರೆ ರೋಚಕ ಪಂದ್ಯಾವಳಿಯನ್ನು ನೋಡಲು ಸಾಧ್ಯವಾಗುತ್ತದೆ.












Click it and Unblock the Notifications