ಬಾಲಕ ವೈಭವ್ ಸೂರ್ಯವಂಶಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ಯಾಕೆ?.. ಪ್ಲೀಸ್ ಉತ್ತರ ನೀಡಿ: ಹರ್ಷ ಭೋಗ್ಲೆ
Vaibhav Sooryavanshi: ಭಾರತೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಹೆಸರುವಾಸಿಯಾಗಿರುವ 15 ವರ್ಷದ ವೈಭವ್ ಸೂರ್ಯವಂಶಿಗೆ ಉಪನಾಯಕನ ಪಟ್ಟವನ್ನು ಕಟ್ಟಲಾಗಿದೆ. ಇದೀಗ ಈ ನಿರ್ಧಾರದ ಕುರಿತು ಹರ್ಷ ಭೋಗ್ಲೆ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ಮುಂಬರುವ 2026-27ರ ದುಲೀಪ್ ಟ್ರೋಫಿ ದೇಶಿ ಕ್ರಿಕೆಟ್ ಸೀಸನ್‌ಗಾಗಿ ಈಸ್ಟ್ ಝೋನ್ (ಪೂರ್ವ ವಲಯ) ಆಯ್ಕೆದಾರರು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ವೈಭವ್‌ಗೆ ನೀಡಿದ ದೊಡ್ಡ ಜವಾಬ್ದಾರಿ ಬಗ್ಗೆ ಚರ್ಚೆ
ಇಶಾನ್ ಕಿಶನ್ ನಾಯಕತ್ವದ ಈ ತಂಡದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲೇ ವೈಭವ್‌ಗೆ ಇಂತಹ ಪ್ರಮುಖ ಜವಾಬ್ದಾರಿ ನೀಡಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಯ್ಕೆ ಮಂಡಳಿಯ ಈ ನಿರ್ಧಾರವನ್ನು ಅಭಿಮಾನಿಗಳು ಹಾಗೂ ಹಲವು ಕ್ರಿಕೆಟ್ ತಜ್ಞರು ಸ್ವಾಗತಿಸಿದರೆ, ಇನ್ನು ಕೆಲವರು ಈ ಸಾಹಸದ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಹರ್ಷ ಭೋಗ್ಲೆ ಹೇಳಿದ್ದೇನು?
ಹಾಗೆಯೇ ಪ್ರಸಿದ್ಧ ಭಾರತೀಯ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಕೂಡ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. "ಇನ್ನೂ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಸಾಬೀತುಪಡಿಸಿಕೊಳ್ಳದ ಈ ಹದಿಹರೆಯದ ಆಟಗಾರನಿಗೆ ಉಪ ನಾಯಕನ ಜವಾಬ್ದಾರಿ ನೀಡಿರುವುದರ ಹಿಂದಿನ ಉದ್ದೇಶ ಏನು?,' ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಅವರಲ್ಲಿ ಪ್ರತಿಭೆಯ ಎಂತಹದ್ದು ಎಂಬ ವಿಚಾರ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಇದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅನುಭವ ಇಲ್ಲದೆ ಇಷ್ಟು ಬೇಗ ಉಪನಾಯಕತ್ವದ ಜವಾಬ್ದಾರಿ ಹೊರಿಸಿರುವುದು ಅವರ ಆಟದ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗಿದೆ.
ಹರ್ಷ ಭೋಗ್ಲೆ ಟ್ವಿಟ್‌ನಲ್ಲಿ ಏನಿದೆ?
ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀಡಿದ ಭರ್ಜರಿ ಪ್ರದರ್ಶನಗಳ ನಂತರ ಈಸ್ಟ್ ಝೋನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದೇ ಸೂರ್ಯವಂಶಿ ಅವರ ಮತ್ತೊಂದು ದೊಡ್ಡ ಮೈಲಿಗಲ್ಲಾಗಿದೆ. 'ಹಿರಿಯರ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸೂರ್ಯವಂಶಿ ಅವರನ್ನು ಉಪನಾಯಕನನ್ನಾಗಿ ಮಾಡಿರುವುದರ ಹಿಂದಿನ ಉದ್ದೇಶ ಏನೆಂದು ನನಗೆ ತಿಳಿಯುತ್ತಿಲ್ಲ,' ಎಂದು ಹರ್ಷ ಭೋಗ್ಲೆ ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.
'ವೈಭವ್ ಇದುವರೆಗೆ ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ 17.25 ಸರಾಸರಿಯಲ್ಲಿ ಕೇವಲ 207 ರನ್ ಗಳಿಸಿದ್ದಾರೆ. ಅವರಲ್ಲಿ ಅದ್ಭುತ ಪ್ರತಿಭೆಯಿದೆ ನಿಜ, ಆದರೆ ಕಲಿಯುವ ಹಂತವೊಂದಿರುತ್ತದೆ ಮತ್ತು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರೀಗಷ್ಟೇ ಆ ಹಂತದ ಆರಂಭದಲ್ಲಿದ್ದಾರೆ,' ಎಂದು ಹರ್ಷ ಭೋಗ್ಲೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಬಂಗಾಳದ ಅನುಭವಿ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ, ಸೂರ್ಯವಂಶಿ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನ ಅನುಭವ ತೀರಾ ಕಡಿಮೆಯಿದೆ. ಅವರು ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 93 ರನ್‌ಗಳ ಗರಿಷ್ಠ ಮೊತ್ತದೊಂದಿಗೆ ಒಟ್ಟು 207 ರನ್ ಗಳಿಸಿದ್ದಾರೆ. ಈ ದುಲೀಪ್ ಟ್ರೋಫಿಯಲ್ಲಿ ಈ ಎಡಗೈ ಬ್ಯಾಟರ್‌ಗೆ ತಮ್ಮನ್ನು ತಾವು ಮತ್ತಷ್ಟು ಸಾಬೀತುಪಡಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿದೆ.
ತಂಡದಲ್ಲಿ ಪ್ರಸಿದ್ಧ ಭಾರತೀಯ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಅವರ ಒದ್ದು, ಇದು ಈಸ್ಟ್ ಝೋನ್ ಪಡೆಯ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಅನುಭವಿ ಆಟಗಾರರಿದ್ದರೂ ಸಹ ಬಾಲಕ ವೈಭವ್ ಸೂರ್ಯವಂಶಿಗೆ ಉಪನಾಯಕನ ಪಟ್ಟ ಕಟ್ಟಿರುವುದೇ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಈಸ್ಟ್ ಝೋನ್ ತಂಡ
ಈಸ್ಟ್ ಝೋನ್ ತಂಡ: ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್ ಘರಾಮಿ, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಸುರಜ್ ಜೈಸ್ವಾಲ್, ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಭ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕೂಲ್ ರಾಯ್ ಮತ್ತು ಡೆನಿಶ್ ದಾಸ್.


Click it and Unblock the Notifications
