Harmanpreet Kaur: ಮಾತನಾಡುತ್ತಲೇ ಕಣ್ಣೀರಿಟ್ಟ ಟೀಮ್ ಇಂಡಿಯಾ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್
Harmanpreet Kaur: ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಕ್ರಮಣಕಾರಿ ಆಡ ಆಡಿ ಗಮನ ಸೆಳೆದರು. ಬಳಿಕ ಮಾತನಾಡುತ್ತಲೇ ಅವರು ಭಾವುಕರಾದ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ಹಳೆಯ ಅಬ್ಬರದ ಶೈಲಿಗೆ ಮರಳಿದ್ದಾರೆ. ಕೇವಲ 41 ಎಸೆತಗಳಲ್ಲಿ ಅಜೇಯ 91 ರನ್ ಸಿಡಿಸಿದ ಅವರು, ಇನಿಂಗ್ಸ್ ಮುಗಿದ ನಂತರ ಪ್ರಸಾರಕರ ಜೊತೆ ಮಾತನಾಡುತ್ತಾ ಕಣ್ಣೀರನ್ನು ತಡೆಯಲಾಗದೆ ಭಾವುಕರಾದರು.

ಭಾರತ ತಂಡದ ನಾಯಕತ್ವ ತ್ಯಜಿಸಿದ್ದ ಹರ್ಮನ್‌ಪ್ರೀತ್ ಕೌರ್
ಕಳೆದ 10 ಪಂದ್ಯಗಳಿಂದ ಒಂದೂ ಅರ್ಧಶತಕ ಗಳಿಸಲು ಸಾಧ್ಯವಾಗದೆ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ 37 ವರ್ಷದ ಹರ್ಮನ್‌ಪ್ರೀತ್ ಕೌರ್ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಟಿ20 ಏಷ್ಯಾ ಕಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲೂ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಯಶಸ್ಸು ಕಂಡಿರಲಿಲ್ಲ. ಅಲ್ಲದೆ, ಜಿಂಬಾಬ್ವೆ ವಿರುದ್ಧದ ತವರು ಸರಣಿಗೂ ಮುನ್ನವೇ ಅವರು ಭಾರತ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.
'ಕ್ರೀಸ್‌ನಲ್ಲಿ ಕೇವಲ ಆಟವನ್ನು ಆನಂದಿಸುವ ಗುರಿ'
ಇನಿಂಗ್ಸ್ ವಿರಾಮದ ಸಮಯದಲ್ಲಿ ಮಾಜಿ ಕೋಚ್ ಹಾಗೂ ಕಾಮೆಂಟೇಟರ್ ಡಬ್ಲ್ಯೂ.ವಿ. ರಾಮನ್ ಅವರೊಂದಿಗೆ ಮಾತನಾಡಿದ ಹರ್ಮನ್‌ಪ್ರೀತ್, 'ತುಂಬಾ ಸಂತೋಷವಾಗುತ್ತಿದೆ. ನಾನು ಕೇವಲ ಮೈದಾನದಲ್ಲಿ ನನ್ನ ಆಟವನ್ನು ಆನಂದಿಸಲು ಬಯಸಿದ್ದೆ. ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು, ರನ್ ಗಳಿಸಿದ್ದು ನಿಜಕ್ಕೂ ತೃಪ್ತಿ ತಂದಿದೆ,' ಎಂದು ಹೇಳಿದರು.
ಮಾತನಾಡುತ್ತಲೇ ಕಣ್ಣೀರಿಟ್ಟ ಹರ್ಮನ್‌ಪ್ರೀತ್ ಕೌರ್
ಮುಂದುವರೆದು ಮಾತನಾಡಿದ ಅವರು, 'ನನ್ನ ಈ ಬದಲಾವಣೆ ಶ್ರೇಯಸ್ಸು ಡಬ್ಲ್ಯೂ.ವಿ. ರಾಮನ್ ಸರ್ ಅವರಿಗೂ ಸಲ್ಲಬೇಕು. ಸರಣಿ ಆರಂಭಕ್ಕೂ ಮುನ್ನ ನೀವು ಬಂದು, ಈಗ ನಿನಗೆ ಏನು ಮಾಡಲು ಇಷ್ಟವೋ ಅದನ್ನು ಮುಕ್ತವಾಗಿ ಮಾಡು' ಎಂದು ಧೈರ್ಯ ತುಂಬಿದಿರಿ. ನಾನು ಸಹ ಅದನ್ನೇ ಮಾಡಲು ಕಾಯುತ್ತಿದ್ದೆ. ನಿಮ್ಮ ಆ ಮಾತುಗಳಿಗೆ ತುಂಬಾ ಧನ್ಯವಾದಗಳು,' ಎನ್ನುತ್ತಿದ್ದಂತೆ ಹರ್ಮನ್‌ಪ್ರೀತ್ ಕಣ್ಣೀರು ಹಾಕಿದರು.
ಬ್ಯಾಟಿಂಗ್ ಕೋಚ್‌ಗೆ ಧನ್ಯವಾದ ತಿಳಿಸಿದ ಹರ್ಮನ್‌ಪ್ರೀತ್
10 ಬೌಂಟರಿ, 5 ಸಿಕ್ಸರ್‌ಗಳನ್ನು ಬಾರಿಸಿದ ಅವರು, ನೆಟ್ಸ್‌ನಲ್ಲಿ ತಮಗೆ ನೆರವಾದ ಬ್ಯಾಟಿಂಗ್ ಕೋಚ್ ಹಿಮಾಂಶು ಅವರ ಶ್ರಮವನ್ನು ಸ್ಮರಿಸಿದರು. 'ಏಷ್ಯನ್ ಗೇಮ್ಸ್ ನಂತರ ನನಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಸಮಯ ಸಿಕ್ಕಿತು. ನನಗಾಗಿ ಸತತವಾಗಿ ಶ್ರಮಿಸುತ್ತಿರುವ ಹಿಮಾಂಶು ಅವರಿಗೆ ಧನ್ಯವಾದಗಳು. ಇಂದಿನ ನನ್ನ ಬ್ಯಾಟಿಂಗ್‌ಗೆ ಅವರೇ ಪ್ರಮುಖ ಕಾರಣ,' ಎಂದು ಹೇಳಿದರು.
ಭಾರತಕ್ಕೆ 92 ರನ್‌ಗಳ ಭರ್ಜರಿ ಗೆಲುವು
ಟೀಮ್ ಇಂಡಿಯಾ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅಬ್ಬರದ 91 ರನ್ ಮತ್ತು ಶಫಾಲಿ ವರ್ಮಾ ಅವರ 69 ರನ್‌ಗಳ ನೆರವಿನಿಂದ ಭಾರತ ತಂಡ 20 ಓವರ್‌ಗಳಲ್ಲಿ 216/7 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವನ್ನು 124/7 ರನ್‌ಗಳಿಗೆ ನಿಯಂತ್ರಿಸಿದ ಭಾರತ 92 ರನ್‌ಗಳ ಜಯ ಸಾಧಿಸಿ, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಒಟ್ಟಿನಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.


Click it and Unblock the Notifications
