Ashish Nehra: ಗುಜರಾತ್ ಟೈಟಾನ್ಸ್ ಕೋಚ್ ಸ್ಥಾನ ತೊರೆಯಲಿರುವ ಆಶಿಶ್ ನೆಹ್ರಾ?
ಗುಜರಾತ್ ಟೈಟಾನ್ಸ್ ತಮ್ಮ ಐಪಿಎಲ್ ಆಡಿದ ಮೊದಲ ಆವೃತ್ತಿಯಲ್ಲೇ ಸೆನ್ಸೇಷನ್ ಸೃಷ್ಟಿಸಿತ್ತು. ಆಡಿದ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗುವ ಮೂಲಕ ಎಲ್ಲ ಫ್ರಾಂಚೈಸಿಗಳಿಗೂ ಆಘಾತ ನೀಡಿತ್ತು. 2022ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಗುಜರಾತ್ ಟೈಟಾನ್ಸ್, 2023ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು. 2024ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡ ತೊರೆದ ಬಳಿಕ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ, ಪ್ಲೇಆಫ್‌ಗೆ ಕೂಡ ಬರದೆ ಐಪಿಎಲ್ ಅಭಿಯಾನ ಮುಗಿಸಿತ್ತು.
ಮೂರು ವರ್ಷಗಳಲ್ಲಿ ಎರಡು ವರ್ಷ ತಂಡದ ಪ್ರದರ್ಶನ ಅದ್ಭುತವಾಗಿತ್ತು. ತಂಡದ ಮುಖ್ಯ ಕೋಚ್ ಆಗಿ ಆಶಿಶ್ ನೆಹ್ರಾ ಮ್ಯಾಜಿಕ್ ಮಾಡಿದ್ದರು. ಆಶಿಶ್-ಪಾಂಡ್ಯ ಜೋಡಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿತ್ತು. ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. 2024ರ ಐಪಿಎಲ್‌ನಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದವು.

ಇದೀಗ 2025ರ ಐಪಿಎಲ್‌ಗೆ ಮುನ್ನ ಕೋಚ್ ಆಶಿಶ್ ನೆಹ್ರಾ ಕೂಡ ಗುಜರಾತ್ ಟೈಟಾನ್ಸ್ ತಂಡದಿಂದ ಬೇರೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಮಾಲೀಕತ್ವ ಬದಲಾಗಿದ್ದು, ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದು, ಮುಖ್ಯ ಕೋಚ್ ಕೂಡ ಬದಲಾಗಲಿದ್ದಾರೆ ಎನ್ನಲಾಗಿದೆ.
ಮಾಲೀಕತ್ವ ಬದಲಾವಣೆ
ಕ್ರಿಕ್‌ಬಜ್ ಪ್ರಕಾರ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಅವರು ಮುಂದಿನ ಐಪಿಎಲ್‌ಗೆ ಮುನ್ನವೇ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಸಿವಿಸಿ ಕ್ಯಾಪಿಟಲ್ ಗುಜರಾತ್ ಟೈಟಾನ್ಸ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದು, ಕೋಚಿಂಗ್ ಸಿಬ್ಬಂದಿಯ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲದಂತಾಗಿದೆ.
ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ (ಜಿಟಿಯ ನಿರ್ದೇಶಕ), ಮತ್ತು ಗ್ಯಾರಿ ಕರ್ಸ್ಟನ್ (ಈಗ ಪಾಕಿಸ್ತಾನ ತಂಡದೊಂದಿಗೆ) ಅವರ ಸ್ಥಾನಗಳು ಅಪಾಯದಲ್ಲಿವೆ. ಸೋಲಂಕಿ ಅವರು ಬದಲಾಗುವ ಸಾಧ್ಯತೆ ಕಡಿಮೆ ಇದ್ದರೂ, ನೆಹ್ರಾ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ. ಯುವರಾಜ್ ಸಿಂಗ್ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಟೊರೆಂಟ್ ಫಾರ್ಮಾ ಅಥವಾ ಅದಾನಿ ಗ್ರೂಪ್‌ನಿಂದ ಷೇರುಗಳನ್ನು ಸಿವಿಸಿ ಕ್ಯಾಪಿಟಲ್ ಪಡೆದುಕೊಂಡಿದೆ ಎಂದು ವದಂತಿಗಳಿವೆ. ಆದರೂ, ಫ್ರಾಂಚೈಸ್ ಷೇರುಗಳಿಗೆ ಕಡ್ಡಾಯವಾದ ಮೂರು-ವರ್ಷದ ಲಾಕ್-ಇನ್ ಅವಧಿಯು ಫೆಬ್ರವರಿ 2025 ರ ಮೊದಲು ಮಾಲೀಕತ್ವದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಹರಾಜಿನಲ್ಲಿ ಈಗಿರುವ ತಂಡವೇ ಮುಂದುವರೆಯುವ ಸಾಧ್ಯತೆ ಇದೆ. ಆದರೂ ಐಪಿಎಲ್ ಆರಂಭಕ್ಕೆ ಮುನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು.












Click it and Unblock the Notifications