ರಜನಿಕಾಂತ್ ಚಿತ್ರದಲ್ಲಿ ಕಪಿಲ್ ದೇವ್; ಫೋಟೊ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ತಲೈವಾ

ಕ್ರಿಕೆಟಿಗರಿಗೂ ಸಿನಿಮಾ ಕ್ಷೇತ್ರಕ್ಕೂ ಅದೇನೋ ಅವಿನಾಭಾವ ಸಂಬಂಧ. ಈಗಾಗಲೇ ಅನೇಕ ಕ್ರಿಕೆಟಿಗರು ಚಿತ್ರಗಳಿಗಾಗಿ ಬಣ್ಣ ಹಚ್ಚಿದ ಉದಾಹರಣೆಗಳಿವೆ. ಯುವರಾಜ್ ಸಿಂಗ್, ಶಿಖರ್ ಧವನ್ ವಿನೋದ್ ಕಾಂಬ್ಳಿ, ಅಜಯ್ ಜಡೇಜಾ, ಸುನಿಲ್ ಗವಾಸ್ಕರ್ ಹಾಗೂ ಯೋಗರಾಜ್ ಸಿಂಗ್ ರೀತಿಯ ಕ್ರಿಕೆಟಿಗರು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಈ ಕ್ರಿಕೆಟಿಗರು ಮಾತ್ರವಲ್ಲದೇ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಸಹ ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ದಿಲ್ಲಾಗಿ ಏಯ್ ದಿಲ್ಲಾಗಿ, ಇಕ್ಬಾಲ್, ಚೈನ್ ಖುಲಿ ಕಿ ಮೈನ್ ಖುಲಿ, ಮುಜ್ಸೆ ಶಾದಿ ಕರೋಗಿ ಎಂಬ ಚಿತ್ರಗಳಲ್ಲಿ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಹೀಗೆ ಹಲವಾರು ಚಿತ್ರಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದ ವರ್ಲ್ಡ್ ಕಪ್ ಹೀರೊ ಕಳೆದ ವರ್ಷ ತೆರೆಗೆ ಬಂದಿದ್ದ 1983ರ ವಿಶ್ವಕಪ್ ಟೂರ್ನಿಯನ್ನು ಟೀಮ್ ಇಂಡಿಯಾ ಗೆದ್ದ ಕಥೆಯಾದ '83' ಸಿನಿಮಾದಲ್ಲಿಯೂ ಸಹ ಕಪಿಲ್ ದೇವ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್ ದೇವ್ ಅವರ ಪಾತ್ರವನ್ನು ರಣ್‌ವೀರ್ ಸಿಂಗ್ ಈ ಚಿತ್ರದಲ್ಲಿ ನಿರ್ವಹಿಸಿದ್ದರು.
ಹೀಗೆ ಹಿಂದಿನಿಂದಲೂ ಸಿನಿಮಾ ಕ್ಷೇತ್ರದ ಜತೆ ನಂಟನ್ನು ಹೊಂದಿರುವ ಕಪಿಲ್ ದೇವ್ ಇದೀಗ ಮತ್ತೊಂದು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಲಾಲ್ ಸಲಾಂ' ಎಂಬ ಚಿತ್ರದಲ್ಲಿ ಕಪಿಲ್ ದೇವ್ ನಟಿಸುತ್ತಿದ್ದಾರೆ.
ಈ ವಿಷಯವನ್ನು ಸ್ವತಃ ರಜನಿಕಾಂತ್ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಲಾಲ್ ಸಲಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕಪಿಲ್ ದೇವ್ ಜತೆಗಿರುವ ಫೋಟೊ ಹಂಚಿಕೊಂಡಿರುವ ರಜನಿಕಾಂತ್ "ಕ್ರಿಕೆಟ್ ವಿಶ್ವಕಪ್ ಅನ್ನು ಮೊದಲು ಗೆಲ್ಲುವ ಮೂಲಕ ಭಾರತ ದೇಶಕ್ಕೆ ಹೆಮ್ಮೆ ತಂದ ಗೌರವಾನ್ವಿತ, ಅತ್ಯದ್ಭುತ ವ್ಯಕ್ತಿಯಾದ ಕಪಿಲ್ ದೇವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆ ತಂದಿದೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಲಾಲ್ ಸಲಾಮ್ ಚಿತ್ರಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯ ಧನುಷ್ ಆಕ್ಷನ್ ಕಟ್ ಹೇಳಿದ್ದು, ರಜನಿಕಾಂತ್ ಲೀಡ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೆ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.












Click it and Unblock the Notifications