IPL 2025: ಆರ್‌ಸಿಬಿ ಮಾಜಿ ನಾಯಕನಿಗೆ ಮಹತ್ವದ ಜವಾಬ್ದಾರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ 2025ರ ಆವೃತ್ತಿಗೆ ಇನ್ನು ಐದು ದಿನಗಳು ಬಾಕಿ ಇದೆ. ಈ ಬಾರಿ ಐದು ತಂಡಗಳಿಗೆ ಹೊಸ ನಾಯಕನನ್ನು ನೇಮಕ ಮಾಡಲಾಗಿದೆ. ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಎಲ್‌ಎಸ್‌ಜಿ ತಂಡಗಳು ಮೆಗಾ ಹರಾಜಿಗೆ ಮುನ್ನ ನಾಯಕನನ್ನೇ ಬಿಡುಗಡೆ ಮಾಡಿದ್ದು, ಇದೀಗ ಹೊಸ ನಾಯಕನ ನೇಮಕ ಮಾಡಿವೆ. ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿರುವ ಆರ್‌ಸಿಬಿ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಜವಾಬ್ದಾರಿ ನೀಡಿದೆ.
2025ರ ಐಪಿಎಲ್‌ಗಾಗಿ ಅಕ್ಷರ್ ಪಟೇಲ್‌ಗೆ ನಾಯಕತ್ವ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಫಾಫ್ ಡುಪ್ಲೆಸಿಸ್‌ಗೆ ಉಪನಾಯಕನ ಜವಾಬ್ದಾರಿ ನೀಡಿದೆ. ಮೆಗಾ ಹರಾಜಿಗೆ ಮುನ್ನ ಆರ್ ಸಿಬಿ ಫಾಫ್ ಡುಪ್ಲೆಸಿಸ್‌ರನ್ನು ಕೈಬಿಟ್ಟಿತ್ತು, ಮೆಗಾ ಹರಾಜಿನಲ್ಲಿ ಅವರನ್ನು ಮತ್ತೆ ಖರೀದಿ ಮಾಡಬಹುದು ಎಂದು ನಿರೀಕ್ಷೆ ಮಾಡಿದ್ದರೂ, ಆರ್ ಸಿಬಿ ಅವರಿಗೆ ಬಿಡ್ ಮಾಡಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಫಾಫ್ ಡುಪ್ಲೆಸಿಸ್‌ರನ್ನು 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. 3 ವರ್ಷಗಳ ಕಾಲ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ ಅಪಾರ ಅನುಭವ ಹೊಂದಿದ್ದು ತಂಡಕ್ಕೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಫಾಫ್ ಡು ಪ್ಲೆಸಿಸ್ ಅವರನ್ನು ಮುಂಬರುವ ಋತುವಿಗೆ ಉಪನಾಯಕನನ್ನಾಗಿ ಘೋಷಿಸಲು ವಿಡಿಯೋ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಈಗ ಅಕ್ಷರ್ ಪಟೇಲ್‌ಗೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಫಾಫ್ ಡುಪ್ಲೆಸಿಸ್ ಉಪನಾಯಕನ ಜವಾಬ್ದಾರಿ ಪಡೆಯುವ ಮೂಲಕ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನವನ್ನು ದೃಢಪಡಿಸಿಕೊಂಡಿದ್ದಾರೆ.
ಫಾಫ್ ಡುಪ್ಲೆಸಿಸ್ 42 ಪಂದ್ಯಗಳಲ್ಲಿ ಆರ್‌ಸಿಬಿ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ, ಅದರಲ್ಲಿ ಅವರು 21 ಪಂದ್ಯಗಳನ್ನು ಗೆದ್ದಿದ್ದು 21 ಪಂದ್ಯಗಳನ್ನು ಸೋತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ನಂತರ ಆರ್‌ಸಿಬಿಯ ಎರಡನೇ ಅತ್ಯುತ್ತಮ ನಾಯಕ ಎಂಬ ದಾಖಲೆ ಅವರದ್ದಾಗಿದೆ.
ಸಿಎಸ್‌ಕೆ ತಂಡದ ಜೊತೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ಫಾಫ್ ಡುಪ್ಲೆಸಿಸ್ ಬಳಿಕ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಆಡಿದರು. ಬಳಿಕ ಮತ್ತೆ ಸಿಎಸ್‌ಕೆ ತಂಡಕ್ಕೆ ಮರಳಿದರು. 2022 ರಲ್ಲಿ ಅವರನ್ನು ಬಿಡುಗಡೆ ಮಾಡಿದ ಬಳಿಕ ಆರ್ ಸಿಬಿ ತಂಡಕ್ಕೆ ಸೇರಿದರು, ವಿರಾಟ್ ಕೊಹ್ಲಿ ಬಳಿಕ ಡುಪ್ಲೆಸಿಸ್ ನಾಯಕರಾಗಿ ಅಧಿಕಾರ ಸ್ವೀಕರಿಸಿದರು.












Click it and Unblock the Notifications