Finn Allen: 62 ಎಸೆತ 137 ರನ್, 5 ಬೌಂಡರಿ 16 ಸಿಕ್ಸರ್: ಪಾಕಿಸ್ತಾನದ ವಿರುದ್ಧ ಅಬ್ಬರಿಸಿದ ಮಾಜಿ ಆರ್ಸಿಬಿ ಆಟಗಾರ
ನ್ಯೂಜಿಲೆಂಡ್‌ನ ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಪಾಕಿಸ್ತಾನದ ವಿರುದ್ಧ ಅಬ್ಬರಿಸಿದರು. ಅವರ ಅಮೋಘ ಶತಕದ ನೆರವಿನಿಂದ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಸುಲಭ ಗೆಲುವು ಸಾಧಿಸಿತು.
5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಆಟಗಾರ ಫಿನ್ ಅಲೆನ್, ಮೊದಲ ಎಸೆತದಿಂದಲೇ ಪಾಕಿಸ್ತಾನ ಬೌಲರ್ ಗಳನ್ನು ದಂಡಿಸಿದರು. ಹ್ಯಾರಿಸ್ ರೌಫ್ ಅವರ ಒಂದೇ ಓವರ್ ನಲ್ಲಿ 27 ರನ್ ಸಿಡಿಸುವ ಮೂಲಕ ಮಿಂಚಿದರು.

ಫಿನ್ ಅಲೆನ್ ಕೇವಲ 62 ಎಸೆತಗಳಲ್ಲಿ 5 ಬೌಂಡರಿ 16 ಭರ್ಜರಿ ಸಿಕ್ಸರ್ ಸಹಿತ 137 ರನ್ ಗಳಿಸಿದರು. ಸೀಫರ್ಟ್ 23 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಫಿನ್ ಅಲೆನ್‌ಗೆ ಜೊತೆಯಾದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.
ಬಾಬರ್ ಹೋರಾಟ ವ್ಯರ್ಥ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ಯಾವ ಹಂತದಲ್ಲೂ ನ್ಯೂಜಿಲೆಂಡ್‌ಗೆ ಸವಾಲಾಕಲಿಲ್ಲ. ಬಾಬರ್ ಅಜಮ್ 37 ಎಸೆತಗಳಲ್ಲಿ 58 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ನ್ಯೂಜಿಲೆಂಡ್ ಬೌಲಿಂಗ್ ಎದುರು ನಿಲ್ಲಲಿಲ್ಲ.
20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ನ್ಯೂಜಿಲೆಂಡ್ 45 ರನ್‌ಗಳ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಮುನ್ನಡೆ ಪಡೆದುಕೊಂಡು ಇನ್ನೂ ಎರಡು ಪಂದ್ಯ ಇರುವಂತೆಯೇ ಸರಣಿ ಗೆದ್ದುಕೊಂಡಿದೆ.
ಹೊಸ ದಾಖಲೆ ಬರೆದ ಫಿನ್ ಅಲೆನ್
ಎರಡನೇ ಟಿ20 ಪಂದ್ಯದಲ್ಲಿ 21 ಎಸೆತಗಳಲ್ಲಿ ಅವರ ಸ್ಫೋಟಕ 74 ರನ್ ಗಳಿಸಿದ್ದ ಫಿನ್ ಅಲೆನ್ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈವರೆಗೂ ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರವಾಗಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದು, ಹೊಸ ದಾಖಲೆ ಬರೆದರು. ಅಫ್ಘಾನಿಸ್ತಾನದ ಹಝ್ರತುಲ್ಲಾ ಝಜೈ ಒಂದೇ ಇನ್ನಿಂಗ್ಸ್‌ನಲ್ಲಿ 16 ಸಿಕ್ಸರ್ ಬಾರಿಸಿದ್ದ ದಾಖಲೆಯನ್ನು ಫಿನ್ ಅಲೆನ್ ಸರಿಗಟ್ಟಿದರು.
ಹ್ಯಾರಿಸ್ ರೌಫ್ ತನ್ನ ನಾಲ್ಕು ಓವರ್‌ಗಳಲ್ಲಿ 60 ರನ್‌ಗಳನ್ನು ಬಿಟ್ಟುಕೊಟ್ಟರೆ, ಮೊಹಮ್ಮದ್ ನವಾಜ್ ಮತ್ತು ಶಾಹೀನ್ ಅಫ್ರಿದಿ ಕ್ರಮವಾಗಿ 44 ಮತ್ತು 43 ರನ್‌ಗಳನ್ನು ಬಿಟ್ಟುಕೊಟ್ಟರು. ಅಲೆನ್ ಅವರ ಬ್ಯಾಟಿಂಗ್ ಹೇಗಿತ್ತು ಎಂದರೆ ಅವರ ಇನ್ನಿಂಗ್ಸ್‌ನಲ್ಲಿ ಅಂಪೈರ್‌ಗಳು ಚೆಂಡನ್ನು ಮೂರು ಬಾರಿ ಬದಲಾಯಿಸಬೇಕಾಯಿತು.
2022ರ ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ಫಿನ್ ಅಲೆನ್‌ರನ್ನು 80 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಎರಡು ವರ್ಷಗಳ ಕಾಲ ಅವರು ತಂಡದಲ್ಲಿ ಇದ್ದರೂ ಒಂದೇ ಒಂದು ಐಪಿಎಲ್ ಪಂದ್ಯವನ್ನು ಆಡಲಿಲ್ಲ. 2024 ಐಪಿಎಲ್ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಿದೆ.












Click it and Unblock the Notifications