Ind vs Eng: ಮೂರನೇ ಪಂದ್ಯ ಗೆದ್ದ ಇಂಗ್ಲೆಂಡ್; ರೋಚಕ ಘಟ್ಟದತ್ತ ಟಿ20 ಸರಣಿ
ಭಾರತದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್ ಮೂರನೇ ಪಂದ್ಯದಲ್ಲಿ ತಿರುಗಿ ಬಿದ್ದಿದ್ದು ಭಾರತಕ್ಕೆ ಸೋಲಿನ ಆಘಾತ ಕೊಟ್ಟಿದೆ. ಮಂಗಳವಾರ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ 26 ರನ್‌ಗಳ ಗೆಲುವು ಸಾಧಿಸಿದ್ದು ಸರಣಿಯ ಹಿನ್ನಡೆಯ ಅಂತರವನ್ನು ಕಡಿಮೆ ಮಾಡಿಕೊಂಡಿದೆ.
ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಪಂದ್ಯ ಗೆದ್ದು ಸರಣಿ ಗೆಲುವು ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದ ಭಾರತಕ್ಕೆ ಇಂಗ್ಲೆಂಡ್ ಆಘಾತ ನೀಡಿದೆ.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಭಾರತದ ಪರವಾಗಿ ವರುಣ್ ಚಕ್ರವರ್ತಿ 4 ಓವರ್ ಗಳಲ್ಲಿ 24 ರನ್ ನೀಡಿ 5 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
ಲಿವಿಂಗ್‌ಸ್ಟೋನ್, ಡಕೆಟ್ ಹೋರಾಟ
ಒಂದು ಕಡೆ ಸತತವಾಗಿ ವಿಕೆಟ್ ಬಿದ್ದರು ನಾಯಕ ಜೋಸ್ ಬಟ್ಲರ್, ಬೆನ್ ಡಕೆಟ್ ಮತ್ತು ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಉತ್ತಮ ಹೋರಾಟ ನೀಡಿದರು. ಜೋಸ್ ಬಟ್ಲರ್ 22 ಎಸೆತಗಳಲ್ಲಿ 24 ರನ್ ಗಳಿಸಿದರೆ, ಬೆನ್ ಡಕೆಟ್ 28 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ 51 ರನ್ ಗಳಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ 24 ಎಸೆತಗಳಲ್ಲಿ 1 ಬೌಂಡರಿ 5 ಸಿಕ್ಸರ್ ಸಹಿತ 43 ರನ್ ಗಳಿಸುವ ಮೂಲಕ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.
ಆದಿಲ್ ರಶೀದ್, ಓವರ್ಟನ್ ಉತ್ತಮ ಬೌಲಿಂಗ್
172 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಸಂಜು ಸ್ಯಾಮ್ಸನ್ ಕೇವಲ 3 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ 24 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 35 ಎಸೆತಗಳಲ್ಲಿ 40 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಕೇವಲ ಒಂದಂಕಿಗೆ ಔಟಾದರು.
ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ ಒಂದು ವಿಕೆಟ್ ಪಡೆದು ಪಂದ್ಯವನ್ನು ತಿರುಗಿಸಿದರು. ಜೇಮಿ ಓವರ್ಟನ್ 4 ಓವರ್ ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್ ತಲಾ 2 ವಿಕೆಟ್ ಪಡೆದರು.












Click it and Unblock the Notifications