India vs Pakistan: ಭಾರತ ಗೆಲ್ಲುತ್ತದೆ ಎಂದು 5.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ ಗಾಯಕ
ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಹು ನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ನಡೆಯಲಿದೆ.
ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯವನ್ನು ನೋಡಲು ಕಾಯುತ್ತಿದ್ದಾರೆ. ಭಾರತದಲ್ಲಿ ಬೆಟ್ಟಿಂಗ್ ಕಟ್ಟುವುದು ಕಾನೂನು ಪ್ರಕಾರ ಅಪರಾಧ, ಆದರೆ ವಿದೇಶಗಳಲ್ಲಿ ಬೆಟ್ಟಿಂಗ್ ಎನ್ನುವುದು ಅಧಿಕೃತವಾಗಿದೆ.

ಐಪಿಎಲ್ 2024 ಫೈನಲ್ ಪಂದ್ಯದಲ್ಲಿ ಕೆಕೆಆರ್ ಪರವಾಗಿ ಬಾಜಿ ಕಟ್ಟಿ 3.73 ಕೋಟಿ ರೂಪಾಯಿ ಬಹುಮಾನ ಗೆದ್ದ ಗ್ರ್ಯಾಮಿ ಪ್ರಶಸ್ತಿ ವಿಜೇತ, ಕೆನಡಾದ ರಾಪರ್ ಡ್ರೇಕ್ ಈಗ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೂ ಕೋಟಿ ಕೋಟಿ ಬೆಟ್ಟಿಂಗ್ ಕಟ್ಟಿ ಸುದ್ದಿಯಾಗಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಡ್ರೇಕ್ $650,000 (₹5.4 ಕೋಟಿ) ಬೃಹತ್ ಬಾಜಿ ಕಟ್ಟಿದ್ದಾರೆ. ಭಾರತ ಗೆಲ್ಲುತ್ತದೆ ಎಂದು ಅವರು ಬೆಟ್ಟಿಂಗ್ ಕಟ್ಟಿದ್ದುಭಾರತವು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆದ್ದರೆ $ 910,000 (₹7.6 ಕೋಟಿ) ಪಡೆಯುತ್ತಾರೆ.
ಭಾರತ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿರುವ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರೋಚಕ ಹಣಾಹಣಿ ನಿರೀಕ್ಷೆ
ಐಸಿಸಿ ಪಂದ್ಯಾವಳಿಯಲ್ಲಿ ಮಾತ್ರ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಅವಕಾಶ ಸಿಗುವುದರಿಂದ ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಕಾತತರಾಗಿರುತ್ತಾರೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೂಪರ್ ಓವರ್ ನಲ್ಲಿ ಸೋತಿರುವ ಪಾಕಿಸ್ತಾನ ಭಾರತದ ವಿರುದ್ಧ ಸೋತರೆ ಸೂಪರ್ 8 ಹಂತದ ಹಾದಿ ಕಠಿಣವಾಗಲಿದೆ. ಭಾರತವು ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿ ಎರಡು ಅಂಕ ಗಳಿಸಿದ್ದು, ಇಂದಿನ ಪಂದ್ಯದಲ್ಲಿ ಗೆದ್ದರೆ ಸೂಪರ್ 8 ತಲುಪುವುದು ಬಹುತೇಕ ಖಚಿತವಾಗುತ್ತದೆ.
ಜಾಹೀರಾತು ದರ ಗಗನಕ್ಕೆ
ಭಾರತ ಪಾಕಿಸ್ತಾನ ಪಂದ್ಯದ ವೇಳೆ ಜಾಹೀರಾತು ಪ್ರಸಾರ ಮಾಡಲು ಪ್ರಮುಖ ಕಂಪನಿಗಳು ಪೈಪೋಟಿ ನಡೆಸುವ ಕಾರಣ, ಜಾಹೀರಾತು ದರ ಗಗನಕ್ಕೇರಿದೆ. ವರದಿಗಳ ಪ್ರಕಾರ 10 ಸೆಕೆಂಡ್ ಜಾಹೀರಾತು ಪ್ರಚಾರ ಮಾಡಲು ಸುಮಾರು 40 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.












Click it and Unblock the Notifications