ಐಸಿಸಿ ವಿಶ್ವಕಪ್: ಬೆಂಗಳೂರಿನಲ್ಲಿ ಶ್ರೀಲಂಕಾಗೆ ಹೀನಾಯ ಸೋಲು, ಕಿವೀಸ್ ಸೆಮಿಫೈನಲ್ ಹಾದಿ ಕಥೆ ಏನು?
ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಅಂತಿಮ ಹಂತ ಸಮೀಪಿಸುತ್ತಿದೆ, ಹಾಗೇ ಇದೇ ಸಮಯದಲ್ಲಿ ಶ್ರೀಲಂಕಾ ತಂಡದ ಹೀನಾಯ ಪ್ರದರ್ಶನ ಕೂಡ ಮುಂದುವರಿದಿದೆ. ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವು 5 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ತನ್ನ ವಿಶ್ವಕಪ್ ಸಂಚಾರ ಮುಗಿಸಿದೆ.
ವಿಶ್ವಕಪ್ ಕ್ರಿಕೆಟ್ 2023 ಶುರುವಾಗುವುದಕ್ಕೂ ಮೊದಲು ಶ್ರೀಲಂಕಾ ಕೂಡ ಟೂರ್ನಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಒಂದಾಗಿತ್ತು. ಆದರೆ ನೋಡ ನೋಡುತ್ತಲೇ ಶ್ರೀಲಂಕಾ ತಂಡ, ಹೀನಾಯ ಪ್ರದರ್ಶನ ನೀಡುತ್ತಾ ಕುಸಿದು ಬಿತ್ತು. ಅದರಲ್ಲೂ ಭಾರತದ ವಿರುದ್ಧ ಸೋತು ಹೋದ ಪಂದ್ಯ, ಇಡೀ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಗಳ ಪೈಕಿ ಒಂದು ಎಂಬ ಕುಖ್ಯಾತಿ ಪಡೆದಿದೆ. ಪರಿಸ್ಥಿತಿ ಹೀಗಿದ್ದಾಗಲೇ ತನ್ನ ಕೊನೆಯ ಪಂದ್ಯ ಕೂಡ ಕೈಚೆಲ್ಲಿದೆ ಲಂಕನ್ನರ ಕ್ರಿಕೆಟ್ ಪಡೆ.

ಶ್ರೀಲಂಕಾ ಪರಿಸ್ಥಿತಿ ಏಕೆ ಹೀಗಾಯ್ತು?
ಭಾರತದ ರೀತಿಯೇ ಶ್ರೀಲಂಕಾ ತಂಡದ ಕ್ರಿಕೆಟ್‌ಗೂ ದೊಡ್ಡ ಇತಿಹಾಸ ಇದೆ. ಅದರಲ್ಲೂ, ಘಟಾನುಘಟಿ ದೇಶಗಳನ್ನೇ ಲಂಕಾ ಟೀಂ ಸೋಲಿಸಿ ನೀರು ಕುಡಿಸಿದ ಇತಿಹಾಸವೂ ಇದೆ. ಆದರೆ ಇಂಥ ತಂಡ ಈಗ ಇಷ್ಟು ಹೀನಾಯ ಪ್ರದರ್ಶನ ನೀಡುತ್ತಿದೆ ಅಂದ್ರೆ ನಂಬುವುದಕ್ಕೆ ಕೂಡ ಕಷ್ಟ ಅಂತಿದ್ದಾರೆ ಕ್ರಿಕೆಟ್ ಅಭಿಮಾನಿಗಳು. 1996ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ್ನು ಗೆದ್ದು ವರ್ಲ್ಡ್ ಚಾಂಪಿಯನ್ ಆಗಿದ್ದ ಶ್ರೀಲಂಕಾ, 2023ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 46.4 ಓವರ್‌ನಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತ್ತು.
ನ್ಯೂಜಿಲೆಂಡ್‌ಗೂ ಎದುರಾಗಿತ್ತು ಆತಂಕ!
ಶ್ರೀಲಂಕಾ ನೀಡಿದ್ದ 172 ರನ್‌ಗಳ ಗುರಿ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಅಬ್ಬರಿಸಿತು. ನೋಡ ನೋಡುತ್ತಲೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪುವ ನಿರೀಕ್ಷೆಯನ್ನೂ ಮೂಡಿಸಿತ್ತು. ಆದರೆ 12.2 ಓವರ್‌ನಲ್ಲಿ 86 ರನ್ ಗಳಿಸಿದ್ದಾಗ ಕಿವೀಸ್ ಪಡೆಯ ಮೊದಲ ವಿಕೆಟ್ ಮಕಾಡೆ ಮಲಗಿತ್ತು. ಹೀಗೆ ತನ್ನ ಮೊದಲ ವಿಕೆಟ್‌ನ 86 ರನ್‌ಗೆ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡ, ಕೇವಲ ಎರಡು ರನ್ ಅಂದ್ರೆ 88 ರನ್‌ಗೆ ತನ್ನ 2ನೇ ವಿಕೆಟ್ ಕೂಡ ಕಳೆದುಕೊಂಡಿತ್ತು.

4ನೇ ಸ್ಥಾನದಲ್ಲಿ ಕಿವೀಸ್ ಸೇಫ್
ಹೀಗೆ ನೋಡ ನೋಡುತ್ತಲೇ 145 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಪಡೆ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಂತಿಮವಾಗಿ ಮಿಚ್ಚೆಲ್ ಕಿವೀಸ್ ಪರವಾಗಿ ಅಬ್ಬರಿಸಿ, 31 ಎಸೆತದಲ್ಲಿ 43 ರನ್ ಸಿಡಿಸಿದರು. ಅಂತಿಮವಾಗಿ 23.2 ಓವರ್‌ಗೆ ಕಿವೀಸ್ ಪಡೆ ತನ್ನ ಗುರಿ ತಲುಪಿತ್ತು. ಈ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳ ಪೈಕಿ, 5 ಮ್ಯಾಚ್ ಗೆದ್ದು ಇದೀಗ 4ನೇ ಸ್ಥಾನದಲ್ಲಿ ಸೇಫ್ ಆಗಿದೆ ಕಿವೀಸ್.
ಭಾರತಕ್ಕೆ ಪಾಕಿಸ್ತಾನ ಮತ್ತೆ ಎದುರಾಳಿ?
ಒಟ್ನಲ್ಲಿ ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ಮತ್ತಷ್ಟು ಹತ್ತಿರವು ಆಗಿದೆ. ಆದ್ರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ನಂತರ ಸೆಮಿಫೈನಲ್ ತಲುಪುವ 4ನೇ ತಂಡ ಯಾವುದು? ಎಂಬುದು ಸ್ಪಷ್ಟವಾಗಲಿದೆ. ಯಾಕಂದ್ರೆ ಈ ಮೂರೂ ತಂಡಗಳು ಸಮವಾಗಿ ಅಂಕಗಳನ್ನು ಪಡೆದಿದ್ದು, ಇನ್ನು ಕೆಲವೇ ದಿನದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಅಕಸ್ಮಾತ್ ನ್ಯೂಜಿಲೆಂಡ್, ಪಾಕಿಸ್ತಾನ & ಅಫ್ಘಾನಿಸ್ತಾನ ತಂಡಗಳ ಅಂಕ ಸಮ ಆಗೋದರೆ ರನ್‌ರೇಟ್ ಆಧಾರದಲ್ಲಿ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ಈಗಿನ ಲೆಕ್ಕಾಚಾರಗಳ ಪ್ರಕಾರ ಪಾಕಿಸ್ತಾನ ತಂಡವೇ ಸೆಮಿಫೈನಲ್ ತಲುಪುವ ನಿರೀಕ್ಷೆ ಇದೆ. ಹೀಗೆ ನಡೆದಿದ್ದೇ ಆದರೆ ಭಾರತಕ್ಕೆ ಪಾಕಿಸ್ತಾನ ಎದುರಾಳಿ ಆಗಲಿದೆ.












Click it and Unblock the Notifications