ದಸರಾ ಸಿ.ಎಂ. ಕಪ್ 2023: ಕ್ರೀಡಾಕೂಟ ಆಯೋಜನೆ ಮಾರ್ಗಸೂಚಿ
ಬೆಂಗಳೂರು, ಅಕ್ಟೋಬರ್ 04; ಕರ್ನಾಟಕ ಸರ್ಕಾರದ ಆಯುಕ್ತರ ಕಾರ್ಯಾಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2023ನೇ ಸಾಲಿನ ದಸರಾ ಕ್ರೀಡಾಕೂಟವನ್ನು ವಿಭಾಗ ಮಟ್ಟದಲ್ಲಿ ಮತ್ತು ದಸರಾ ಸಿ. ಎಂ. ಕಪ್-2023 ಆಯೋಜನೆ ಮಾಡುವ ಕುರಿತು ಸುತ್ತೋಲೆ ಹೊರಡಿಸಿದೆ.
2023ನೇ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ವಿಭಾಗ ಮಟ್ಟದಲ್ಲಿ ಆಯೋಜಿಸುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ. ಕಛೇರಿಯ ಸುತ್ತೋಲೆ ದಿನಾಂಕ 16/08/2023 ಉಲ್ಲೇಖ ಮಾಡಲಾಗಿದೆ. ಸುತ್ತೋಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವನ್ನು ಹೊಸ ಮಾದರಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಅಂಗವಾಗಿ ಎರಡು ಪ್ರತ್ಯೇಕ ಕ್ರೀಡಾಕೂಟಗಳು ನಡೆಯಲಿವೆ ಎಂದು ಹೇಳಿದೆ.

* ಪ್ರತಿಭಾನ್ವೇಷಣಾ ದಸರಾ ಸಿ.ಎಂ. ಕಪ್-2023: ಪ್ರತಿ ವರ್ಷದಂತೆ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟಗಳಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಿ, ವಿಭಾಗ ಮಟ್ಟದಲ್ಲಿ ಆಯ್ಕೆಯಾದವರಿಗೆ ದಿನಾಂಕ 11/10/2023 ರಿಂದ 15/10/2023ರವರೆಗೆ (ಕ್ರೀಡಾಪಟುಗಳು ಮೈಸೂರಿನಲ್ಲಿ ವರದಿ ಮಾಡಿಕೊಳ್ಳಬೇಕಾದ ದಿನಾಂಕ 10/10/2023ರ ಅಪರಾಹ್ನ ಮೈಸೂರಿನಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ.
* ಒಲಿಂಪಿಕ್ ಮಾದರಿ ದಸರಾ ಸಿ.ಎಂ. ಕಪ್-2023: ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ರಾಜ್ಯ ಕ್ರೀಡಾ ಸಂಸ್ಥೆಗಳು ನಿಯೋಜಿಸುವ ಅತ್ಯುನ್ನತ 8 ಕ್ರೀಡಾಪಟುಗಳು/ ಕ್ರೀಡಾ ತಂಡಗಳ ನಡುವೆ ಸ್ಪರ್ಧೆ ಒಳಗೊಂಡ ದಸರಾ ಸಿ.ಎಂ. ಕಪ್ ಕ್ರೀಡಾಕೂಟವನ್ನು ದಿನಾಂಕ 16/10/2023 ರಿಂದ 21/10/2023ರವರೆಗೆ ಮೈಸೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಸದರಿ ಕ್ರೀಡಾಕೂಟದ ಆಯೋಜನೆಯ ಸಂಪೂರ್ಣ ವ್ಯವಸ್ಥೆಯನ್ನು ಕೇಂದ್ರ ಕಛೇರಿಯ ಮೂಲಕ ನಿರ್ವಹಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.
ಪ್ರತಿಭಾನ್ವೇಷಣಾ ದಸರಾ ಸಿ.ಎಂ. ಕಪ್-2023
ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳಿಗೆ ದಿನಾಂಕ 11/10/2023 ರಿಂದ 15/10/2023ರವರೆಗೆ ಮೈಸೂರಿನಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದ್ದು, ಕ್ರೀಡಾಪಟುಗಳು ದಿನಾಂಕ 10/10/2023ರಂದು ಅಪರಾಹ್ನ ವರದಿ ಮಾಡಿಕೊಳ್ಳತಕ್ಕದ್ದು.
ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ದಿನಾಂಕ 27/9/2023ರೊಳಗಾಗಿ ಹಾಗೂ ವಿಭಾಗ ಮಟ್ಟದ ಕ್ರೀಡಾಕೂಟವನ್ನು ದಿನಾಂಕ 02/10/2023ರೊಳಗಾಗಿ ಸೂಚಿಸಲಾದ ಜಿಲ್ಲೆಗಳಲ್ಲಿ ಆಯೋಜಿಸಲು ಆದೇಶಿಸಿದೆ. ವಿಭಾಗ ಮಟ್ಟದಲ್ಲಿ ಕ್ರೀಡಾಕೂಟ/ ಆಯ್ಕೆ ಪ್ರಕ್ರಿಯೆ ಮೂಲಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ಕ್ರೀಡಾಪಟುಗಳ ಸಂಪೂರ್ಣ ಮಾಹಿತಿಯನ್ನು ನಮೂನೆಯಲ್ಲಿ ಕ್ರೀಡಾಪಟುಗಳಿಂದ ಭರ್ತಿ ಮಾಡಿಸಿ, ಸಂಬಂಧಿತ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು ದೃಢೀಕರಿಸತಕ್ಕದ್ದು ಹಾಗೂ ಈ ದಾಖಲೆಯನ್ನು ತಮ್ಮ ಕಛೇರಿಯಲ್ಲಿ ಕಾಯ್ದಿರಿಸತಕ್ಕದ್ದು.
ವಿಭಾಗ ಮಟ್ಟದಿಂದ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಮಾಹಿತಿಯನ್ನು ದಸರಾ ಕ್ರೀಡಾಕೂಟದ ಅಧಿಕೃತ ಪೋರ್ಟಲ್‌ನಲ್ಲಿ ( https://www.dasaracmcup.com ) ಸಂಬಂಧಿತ ಉಪ/ ಸಹಾಯಕ ನಿರ್ದೇಶಕರು ಅಪ್‌ಲೋಡ್ ಮಾಡಬೇಕಾಗುವುದು. ವಿಭಾಗ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿದ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರಿಗೆ ಅಧಿಕೃತ ಇ- ಮೇಲ್ ಮೂಲಕ User ID ಹಾಗೂ Password ಗಳನ್ನು ಒದಗಿಸಲಾಗುವುದು.
ಕ್ರೀಡಾಪಟುಗಳ ಮಾಹಿತಿ ಅಪ್‌ಲೋಡ್ ಮಾಡುವ ಅಧಿಕಾರಿಗಳು ತಮ್ಮ User ID ಹಾಗೂ Password ಗಳನ್ನು ಬಳಸುವ ಕುರಿತು ಎಚ್ಚರಿಕೆ ವಹಿಸತಕ್ಕದ್ದು ಹಾಗೂ ದುರ್ಬಳಕೆಗೆ ಅವಕಾಶ ನೀಡತಕ್ಕದ್ದಲ್ಲ. ಅನಧಿಕೃತ ವ್ಯಕ್ತಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಮೂಲಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಪತ್ರ/ ಐ.ಡಿ, ಕಾರ್ಡ್ ಅನ್ನು ದಿನಾಂಕ 10/10/2023ರಂದು ಮೈಸೂರಿನಲ್ಲಿ ಆಯಾ ವಿಭಾಗ ಮಟ್ಟದ ಜವಾಬ್ದಾರಿಯುತ ಅಧಿಕಾರಿಗೆ ಹಂಚಿಕೆ ಮಾಡಲಾಗುವುದು. ಸಮವಸ್ತ್ರ, ಊಟೋಪಹಾರ ಹಾಗೂ ವಸತಿ ವ್ಯವಸ್ಥೆ ಪಡೆಯಲು ಐ.ಡಿ. ಕಾರ್ಡ್ ಕಡ್ಡಾಯ, ಕ್ರೀಡಾಪಟುಗಳ ನೋಂದಾವಣಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ, ವಿಭಾಗ ಮಟ್ಟದ ಕ್ರೀಡೆ ಆಯೋಜಿಸಿದ ಸಂಬಂಧಿತ ಅಧಿಕಾರಿಯನ್ನು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು.
ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಅನುದಾನ ಹಂಚಿಕೆಯಾಗುವವರೆಗೆ ಜಿಲ್ಲಾ ಮಟ್ಟದಲ್ಲಿ ಲಭ್ಯವಿರುವ ಅನುದಾನವನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು, ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಬಳಸಿಕೊಳ್ಳತಕ್ಕದ್ದು ಹಾಗೂ ಅನುದಾನ ಬಿಡುಗಡೆಯಾದ ನಂತರ ಪೂರ್ಣ ಮೊತ್ತವನ್ನು ಮರುಪೂರಣ (Reimburse) ಮಾಡತಕ್ಕದ್ದು.
ಒಬ್ಬ ಕ್ರೀಡಾಪಟು ದಸರಾ ಪ್ರಯುಕ್ತ ಆಯೋಜಿಸಲಾಗುವ ಎರಡೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಕರ್ನಾಟಕ ಒಲಿಂಪಿಕ್ ಸಂಸ್ಥೆ ಪ್ರಾಯೋಜಿಸುವ 8 ಅತ್ಯುನ್ನತ ಕ್ರೀಡಾಪಟುಗಳು/ ತಂಡದ ಭಾಗವಾಗಿರುವ ಕ್ರೀಡಾಪಟುಗಳು ಪ್ರತಿಭಾನ್ವೇಷಣಾ ದಸರಾ ಸಿ.ಎಂ. ಕಪ್‌ನಲ್ಲಿ ಪ್ರತ್ಯೇಕವಾಗಿ ವಿಭಾಗವನ್ನು ಪ್ರತಿನಿಧಿಸುವಂತಿಲ್ಲ.
ಪೋರ್ಟಲ್‌ನಲ್ಲಿ ಇಂತಹ ಕ್ರೀಡಾಪಟುಗಳಿಗೆ ಎರಡು ಬಾರಿ ನೋಂದಾವಣಿಗೆ ಅವಕಾಶವಿರುವುದಿಲ್ಲ. ಇಂತಹ ಪ್ರಕರಣಗಳಿದ್ದಲ್ಲಿ, ಸಂಬಂಧಿತ ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜಿಸುವ ಉಪ/ ಸಹಾಯಕ ನಿರ್ದೇಶಕರು ಅಂತಹ ಕ್ರೀಡಾಪಟುಗಳ ನಂತರದ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಅವಕಾಶ ನೀಡತಕ್ಕದ್ದು ಹಾಗೂ ತಂಡ ಸ್ಪರ್ಧೆಗಳಲ್ಲಿ ಆಯಾ ತಂಡಕ್ಕೆ ಬದಲಿ ಆಟಗಾರರನ್ನು ನೋಂದಾಯಿಸಲು ಅವಕಾಶ ಕಲ್ಪಿಸತಕ್ಕದ್ದು.
ಸೈಕ್ಲಿಂಗ್ ಕ್ರೀಡೆಗೆ ಸಂಬಂಧಿಸಿದಂತೆ ಬೆಳಗಾವಿ ವಿಭಾಗದಿಂದ ಗರಿಷ್ಠ 75 ಕ್ರೀಡಾಪಟುಗಳು (ಪುರುಷ ಮತ್ತು ಮಹಿಳಾ ಸೈಕ್ಲಿಸ್ಟ್‌ಗಳು ಸೇರಿದಂತೆ) ಹಾಗೂ ಇತರೆ ವಿಭಾಗಗಳಿಂದ ತಲಾ ಗರಿಷ್ಟ 10 ಕ್ರೀಡಾಪಟುಗಳನ್ನು (ಪುರುಷ ಮತ್ತು ಮಹಿಳಾ) ಸೈಕ್ಲಿಸ್ಟ್‌ಗಳು ಸೇರಿದಂತೆ ಮಾತ್ರ ರಾಜ್ಯ ಮಟ್ಟದ ಸ್ಪರ್ಧೆಗೆ ನಿಯೋಜಿಸತಕ್ಕದ್ದು.
ಕ್ರೀಡಾಪಟುಗಳ ನೋಂದಾವಣಿಗೆ User ID ಮತ್ತು Password ಜಿಲ್ಲಾ ಮಟ್ಟದ ಅಧಿಕಾರಿಯ ಮೊಬೈಲ್ ನಂಬರ್‌ಗೆ ಕಳುಹಿಸಲಾಗುವುದು ಹಾಗೂ ಕ್ರೀಡಾಪಟುಗಳ ನೋಂದಾವಣಿಗೆ ವೆಬ್‌ಸೈಟ್‌ಗೆ ಲಾಗಿನ್ ಆಗುವ ಸಂದರ್ಭದಲ್ಲಿ OTP ಯನ್ನು ಜಿಲ್ಲಾ ಮಟ್ಟದ ಅಧಿಕಾರಿಯ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಆದ್ದರಿಂದ, ವಿಳಂಭವಿಲ್ಲದೇ, ಮಾಹಿತಿ ಒದಗಿಸತಕ್ಕದ್ದು ಎಂದು ಸುತ್ತೋಲೆ ತಿಳಿಸಿದೆ.












Click it and Unblock the Notifications