ಅಪ್ಪನನ್ನು ಕಳೆದುಕೊಂಡ ನೋವಿನಲ್ಲೂ ಬಿಡಲಿಲ್ಲ ಛಲ: ಮಡುಗಟ್ಟಿದ ದುಃಖದ ಮಧ್ಯೆಯೂ ಕಾಮನ್‌ವೆಲ್ತ್ ಜುಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ
Commonwealth Games 2026: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಮಹಿಳೆಯರ 48 ಕೆಜಿ ಜೂಡೋ ವಿಭಾಗದ ಫೈನಲ್‌ನಲ್ಲಿ ಭಾರತದ ಅಸ್ಮಿತಾ ಡೇ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕ ಇದು.
ಕಾಮನ್‌ವೆಲ್ತ್‌ನಲ್ಲಿ ಜೂಡೋದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿರುವ ಅಸ್ಮಿತಾ ಪಯಣ ಸುಲಭದ್ದಾಗಿರಲಿಲ್ಲ. ಕಾಮನ್‌ವೆಲ್ತ್‌ಗೆ ಇನ್ನೇನು ಕೆಲವೇ ತಿಂಗಳು ಇದೆ ಎನ್ನುವಷ್ಟರಲ್ಲಿ ತನ್ನ ದೊಡ್ಡ ಸಪೋರ್ಟ್ ಸಿಸ್ಟಮ್ ಅನ್ನೇ ಕಳೆದುಕೊಂಡಿದ್ದಾರೆ. ತ್ರಿಪುರಾದ ಸಣ್ಣ ಹಳ್ಳಿಯಿಂದ ಬಂದ ಅಸ್ಮಿತಾ ಕನಸಿಗೆ ನೀರು ಹಾಕಿ ಬೆಳೆಸಿದ್ದು ಅವರ ತಂದೆ. ಆದರೆ ಬೆನ್ನ ಹಿಂದೆ ಬೆಂಬಲವಾಗಿ ನಿಂತಿದ್ದ ತಂದೆಯನ್ನು ಏಳು ತಿಂಗಳ ಹಿಂದೆಯಷ್ಟೇ ಕಳೆದುಕೊಂಡಿದ್ದಾರೆ.

ತಂದೆ ಜೊತೆಗಿಲ್ಲದಿದ್ರೆ ತಾನು ಏನೂ ಅಲ್ಲ ಎನ್ನುವುದು ಅಸ್ಮಿತಾಗೂ ಗೊತ್ತಿತ್ತು. ಆಕೆ ಇಷ್ಟು ಗಟ್ಟಿಯಾಗಿದ್ದೇ ತಂದೆಯ ಸಪೋರ್ಟ್‌ನಿಂದ. ಹೀಗಿರುವಾಗ ತಂದೆಯ ಸಾವಿನೊಂದಿಗೆ ಕಾಮನ್‌ವೆಲ್ತ್‌ನಲ್ಲಿ ಗೆಲ್ಲುವ ತನ್ನ ಕನಸು ಕೂಡಾ ಕಮರಿಯೇ ಹೋಯಿತು ಎಂದೇ ಭಾವಿಸಿದ್ದರು ಅಸ್ಮಿತಾ. ಆದ್ರೆ ತ್ರಿಪುರಾದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ 23 ವರ್ಷದ ಅಸ್ಮಿತಾ, ಕೆನಡಾದ ಹೈಡಿ ಕ್ವಾಚ್ ಅವರನ್ನು ಮಣಿಸಿ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ.
ಕಣ್ಣಂಚಿನಲ್ಲಿ ಜಿನುಗುತ್ತಿತ್ತು ನೀರು
ಗೆಲುವಿನ ನಂತರ, ಮಾತನಾಡಿದ ಅಸ್ಮಿತಾ ಕಣ್ಣಾಲಿಗಳು ಒದ್ದೆಯಾಗಿತ್ತು. ತನ್ನ ಮೇಲೆ ಸದಾ ನಂಬಿಕೆ ಇಟ್ಟಿದ್ದ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣೀರಾಗಿದ್ದಾರೆ. ನನ್ನ ತಂದೆ ತೀರಿಕೊಂಡಾಗ ಆಕಾಶವೇ ಕಳಚಿ ಬಿದ್ದಾಂತಾಗಿತ್ತು. ಇಲ್ಲಿಗೆ ಎಲ್ಲವೂ ಮುಗಿದೇ ಹೋಯಿತು ಎನ್ನುವ ಭಾವ. ಬೆಟ್ಟದಂತೆ ಬೆಂಬಲವಾಗಿ ನಿಂತಿದ್ದ ತಂದೆಯ ಆಸರೆ ಇಲ್ಲ ಎನ್ನುವಾಗ ಮುಂದೆ ಹೆಜ್ಜೆ ಇಡುವುದಾದರೂ ಹೇಗೆ ಎನ್ನುವ ಕಲ್ಪನೆಯೇ ಅವರಿಗಿರಲಿಲ್ಲ. ತನ್ನ ಗೆಲುವಿನ ನಂತರ ಈ ಬಗ್ಗೆ ಮಾತನಾಡುವಾಗ ಅಸ್ಮಿತಾಗೆ ಕಣ್ಣೀರು ತಡೆಯುವುದಕ್ಕೂ ಆಗಲಿಲ್ಲ.
ತನ್ನ ತಂದೆ ಯಾವಾಗಲೂ ಸಣ್ಣ ಹಳ್ಳಿಯ ಮಿತಿಗಳನ್ನು ಮೀರಿ ಕನಸು ಕಾಣುವಂತೆ ಹೇಳುತ್ತಿದ್ದರು. ಅದಕ್ಕೆ ಬೇಕಾದ ರೀತಿಯಲ್ಲಿ ಪ್ರೋತ್ಸಾಹ ಕೊಡುತ್ತಿದ್ದರು ಎಂದು ಹೇಳಿದ್ದಾರೆ. ನಾನು ತ್ರಿಪುರಾದ ಒಂದು ಸಣ್ಣ ಹಳ್ಳಿಯಿಂದ ಬಂದವಳು. ಅಲ್ಲಿನ ಜನರು ಇಷ್ಟೊಂದು ದೊಡ್ಡ ಕನಸು ಕಾಣುವುದಿಲ್ಲ. ಆದರೆ, ತನ್ನ ಕನಸನ್ನು ಪೋಷಿಸಿದ್ದು ನನ್ನ ತಂದೆ ಎಂದು ಹೇಳಿದ್ದಾರೆ.
ತಂದೆಯ ಬೆಂಬಲವೇ ಶ್ರೀರಕ್ಷೆ
ನನ್ನ ತಂದೆ ಯಾವಾಗಲೂ ನನ್ನ ಬೆನ್ನ ಹಿಂದೆ ಇದ್ದರು. ಒಂದು ಸಲ ನನಗೆ ಪೆಟ್ಟಾಗಿತ್ತು. ಆ ಸಂದರ್ಭದಲ್ಲಿ ಅಪ್ಪ ನನಗಾಗಿ ದೆಹಲಿಗೆ ಬಂದಿದ್ದರು. ನನ್ನ ಔಷಧ, ಆಸ್ಪತ್ರೆ ಓಡಾಟ ಎಲ್ಲವನ್ನೂ ಅವರೇ ನೋಡಿಕೊಂಡಿದ್ದರು. ಅಮ್ಮ ಮತ್ತು ಅಪ್ಪ ಇಬ್ಬರೂ ತುಂಬಾವೇ ಸಪೋರ್ಟ್ ಮಾಡಿದ್ದಾರೆ. ಆದರೆ ಅಮ್ಮನಿಗೆ ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಡಿಸೆಂಬರ್ 15ಕ್ಕೆ ತಂದೆ ನಿಧನವಾದರು. ಅಲ್ಲಿಗೆ ಎಲ್ಲವೂ ಮುಗೀತು ಅಂದುಕೊಂಡೆ. ಅಪ್ಪ ಇಲ್ಲದೆ ನನಗೆ ಏನೂ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿತ್ತು. ಆದರೆ, ಸಾಯುವ ಮೊದಲು ಅಪ್ಪ ನನ್ನ ಕನಸನ್ನ ಯಾವತ್ತೂ ಸಾಯಲು ಬಿಡಬೇಡ, ಮುಂದಕ್ಕೆ ಹೋಗು ಅಂತ ಧೈರ್ಯ ತುಂಬಿದ್ದರು. ಅಪ್ಪನ ಮಾತಿನಂತೆ ಭೋಪಾಲ್‌ಗೆ ಹೋದೆ. ಅಲ್ಲಿ ನನಗೆ ತುಂಬಾ ಸಪೋರ್ಟ್ ಸಿಕ್ಕಿತು. ಇವತ್ತು ನಾನು ಗೆಲ್ಲವುದಕ್ಕೆ ಅದೇ ಸಪೋರ್ಟ್ ಕಾರಣವಾಯಿತು ಎಂದು ಅಸ್ಮಿತಾ ತನ್ನ ಮನಸ್ಸಿನ ನೋವನ್ನು ಶೇರ್ ಮಾಡಿದ್ದಾರೆ.


Click it and Unblock the Notifications
