Champions Trophy: ಶನಿವಾರ ಎಲ್ಲಾ ಕುತೂಹಗಳಿಗೆ ತೆರೆ ಎಳೆಯಲಿರುವ ಐಸಿಸಿ
ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ಆಯೋಜನೆ ಕುರಿತಂತೆ ಅಂತಿಮ ನಿರ್ಧಾರವನ್ನು ಐಸಿಸಿ ಶನಿವಾರ ತೆಗೆದುಕೊಳ್ಳಲಿದೆ. ಶುಕ್ರವಾರ ಐಸಿಸಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು, ಸದಸ್ಯ ರಾಷ್ಟ್ರಗಳು ಮತ ಚಲಾಯಿಸುವಂತೆ ಮಾಡಬೇಕಿತ್ತು, ಆದರೆ ಮಂಡಳಿಯ ಸದಸ್ಯರು ಪರಿಹಾರಕ್ಕೆ ಒಪ್ಪಿಗೆ ನೀಡದ ಕಾರಣ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ನಾಳೆ ಬಹುತೇಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.
ಕ್ರಿಕ್‌ಬುಜ್ ವರದಿ ಮಾಡಿರುವ ಪ್ರಕಾರ ಐಸಿಸಿ ಮಂಡಳಿ ಸದಸ್ಯರ ಜೊತೆ ಸಭೆ ಕರೆಯಲಾಗಿತ್ತು. ಸಭೆ ಆರಂಭವಾದ 20 ನಿಮಿಷಗಳಲ್ಲೇ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಯಿತು. ಚಾಂಪಿಯನ್ಸ್ ಟ್ರೋಫಿ ಆಯೋಜನೆ ಕುರಿತಂತೆ ನಿರ್ಣತ ತೆಗೆದುಕೊಳ್ಳಲಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡಲು ಒಪ್ಪುತ್ತಿಲ್ಲ. ಪಾಕಿಸ್ತಾನದಲ್ಲೇ ಸಂಪೂರ್ಣ ಪಂದ್ಯಾವಳಿಯನ್ನು ಆಯೋಜಿಸಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ಬಿಸಿಸಿಐ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದೆ.
ಸದಸ್ಯರ ಅಭಿಪ್ರಾಯ ಮುಖ್ಯ
ಚಾಂಪಿಯನ್ಸ್ ಟ್ರೋಫಿ 2025 ರ ಸ್ಥಳವನ್ನು ನಿರ್ಧರಿಸಲು ಐಸಿಸಿ ತನ್ನ ಸದಸ್ಯರ ಅಭಿಪ್ರಾಯವನ್ನು ಪಡೆಯಲಿದೆ. ಎಲ್ಲಾ ಸದಸ್ಯರ ಮತಗಳ ಆಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತ 2008 ರಲ್ಲಿ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಕೊನೆಯ ಬಾರಿಗೆ ಪ್ರಯಾಣಿಸಿತ್ತು. ಎರಡೂ ದೇಶಗಳ ನಡುವೆ ರಾಜಕೀಯ ಸಂಬಂಧ ಹದಗೆಟ್ಟ ಬಳಿಕ ಭಾರತ ಪಾಕಿಸ್ತಾನ ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಹೊಸ ವರಸೆ ತೆಗೆದ ಪಾಕಿಸ್ತಾನ
ಹೈಬ್ರಿಡ್ ಮಾದರಿ ಬೇಡವೇ ಬೇಡ ಭಾರತಕ್ಕೆ ಏನಾದರೂ ಸಮಸ್ಯೆ ಇದ್ದರೆ ನಮ್ಮ ಜೊತೆಯೇ ನೇರವಾಗಿ ಚರ್ಚಿಸಲಿ ಎಂದು ಪಿಸಿಬಿ ಹೇಳಿತ್ತು, ಆದರೆ ಯಾವಾಗ ಬಿಸಿಸಿಐ ಎದುರು ತನ್ನ ಆಟ ನಡೆಯುವುದಿಲ್ಲ ಎನ್ನುವುದು ಖಚಿತವಾಯಿತೋ ಬಳಿಕ ಈಗ ಏನಾದರೂ ಹೈಬ್ರಿಡ್ ಮಾದರಿ ನಡೆಸಿದರೆ, 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕೂಡ ಪಾಕಿಸ್ತಾನದ ಪಂದ್ಯಗಳನ್ನು ಭಾರತದಿಂದ ಹೊರಗೆ ನಡೆಸುವಂತೆ ಬೇಡಿಕೆ ಇಟ್ಟಿದೆ.
ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದೆ ಎನ್ನಲಾಗಿದೆ. ಎಲ್ಲಾ ಸದಸ್ಯರು ಕೂಡ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಸಹಮತ ವ್ಯಕ್ತಪಡಿಸಿದ್ದು ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ದುಬೈನಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಲು ಕೇಳಲಾಗಿದ್ದು, ಇದಕ್ಕೆ 30% ಹೆಚ್ಚಿನ ಹಣವನ್ನು ಕೂಡ ಪಾಕಿಸ್ತಾನ ಐಸಿಸಿಯಿಂದ ಪಡೆಯಲಿದೆ.












Click it and Unblock the Notifications