CSK vs SRH: ಗೆದ್ದ ಸನ್‌ರೈಸರ್ಸ್ ಹೈದಾರಾಬಾದ್; ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಸಿಎಸ್‌ಕೆ!
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ಗೆ ಇದು ಮೊದಲ ಗೆಲುವಾಗಿದೆ. ಈ ಅಂಗಳದಲ್ಲಿ ಸಿಎಸ್‌ಕೆ ವಿರುದ್ಧ ಸತತ ಆರು ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸರ್ಸ್ ಹೈದರಾಬಾದ್ ಕೊನೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಹೊಡಿ ಬಡಿ ಬ್ಯಾಟಿಂಗ್‌ಗೆ ಹೆಸರಾಗಿದ್ದ ಎಸ್‌ಆರ್ ಎಚ್ ಚೆನ್ನೈ ವಿರುದ್ಧ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಮೂಲಕ 155 ರನ್‌ಗಳನ್ನು ಚೇಸ್ ಮಾಡಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹರ್ಷಲ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, ಕಮಿಂದು ಮೆಂಡಿಸ್ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್‌ನಲ್ಲಿ ಪ್ರಮುಖ ಕೊಡುಗೆ ನೀಡಿದರು.

ಹರ್ಷಲ್ ಪಟೇಲ್ ಮಾರಕ ಬೌಲಿಂಗ್
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 19.5 ಓವರ್ ಗಳಲ್ಲಿ 154 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಸಿಎಸ್‌ಕೆ ಪರ ಮೊದಲ ಪಂದ್ಯ ಆಡಿದ ಡೆವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಭರವಸೆ ಮೂಡಿಸಿದರು. ಆದರೆ ಕಮಿಂದು ಮೆಂಡಿಸ್ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಅವರು ಔಟ್ ಆದರು. ಆಯುಷ್ ಮಾತ್ರ 19 ಎಸೆತಗಳಲ್ಲಿ 30 ರನ್ ಗಳಿಸಿದರು. ಜಡೇಜಾ 21 ರನ್, ದೀಪಕ್ ಹೂಡಾ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲಿಲ್ಲ.
ಸನ್‌ರೈಸರ್ಸ್ ಹೈದರಾಬಾದ್ ಪರ ಹರ್ಷಲ್ ಪಟೇಲ್ 4 ಓವರ್ ಗಳಲ್ಲಿ 28 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ನಾಯಕ ಪಾಟ್ ಕಮಿನ್ಸ್ 2 ವಿಕೆಟ್ ಪಡೆದರೆ, ಜಯದೇವ್ ಉನದ್ಕತ್ ಕೂಡ 2 ವಿಕೆಟ್ ಪಡೆದರು. ಶಮಿ ಮತ್ತು ಕಮಿಂದು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.
ಇಶಾನ್ ಕಿಶನ್, ಮೆಂಡಿಸ್ ಎಚ್ಚರಿಕೆಯ ಬ್ಯಾಟಿಂಗ್
155 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಖಾತೆ ತೆರೆಯುವ ಮುನ್ನವೇ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಇಶಾನ್ ಕಿಶನ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಟ್ರಾವಿಸ್ ಹೆಡ್ 19 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 44 ರನ್ ಗಳಿಸುವ ಮೂಲಕ ಅಮೂಲ್ಯ ಕೊಡುಗೆ ನೀಡಿದರು.
ಅನಿಕೇತ್ ವರ್ಮಾ 19 ರನ್, ಹೆನ್ರಿಚ್ ಕ್ಲಾಸೆನ್ 7 ರನ್ ಗಳಿಸಿದರು. ಕಮಿಂದು ಮೆಂಡಿಸ್ 22 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 19 ರನ್ ಗಳಿಸುವ ಮೂಲಕ ಸನ್‌ರೈಸರ್ಸ್ ಗೆಲುವು ಸುಲಭವಾಗಿಸಿದರು. ಈ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಒಟ್ಟಾರೆ 6 ಅಂಕಗಳೊಂದಿಗೆ 8ನೇ ಸ್ಥಾನಕ್ಕೇರಿದೆ. ಉಳಿದ ಐದೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ತಲುಪುವ ಅವಕಾಶ ಇರುವ ಸಾಧ್ಯತೆ ಇದೆ.












Click it and Unblock the Notifications