Cameron Green: ಕ್ಯಾಮೆರಾನ್ ಗ್ರೀನ್ ಅಬ್ಬರ; ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾದ ಪರಾಕ್ರಮ ಮುಂದುವರೆದಿದೆ. ಶನಿವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಐಪಿಎಲ್‌ನಲ್ಲಿ ಆರ್ ಸಿಬಿ ತಂಡಕ್ಕಾಗಿ ಆಡುವ ಕ್ಯಾಮೆರಾನ್ ಗ್ರೀನ್, ಸರಣಿಯ ಕೊನೆ ಪಂದ್ಯದಲ್ಲಿ ಮಿಂಚಿದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಬ್ರೆಂಡನ್ ಮೆಕ್‌ಮುಲೆನ್ 39 ಎಸೆತಗಳಲ್ಲಿ 56 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ಪರವಾಗಿ ಕ್ಯಾಮೆರಾನ್ ಗ್ರೀನ್ 3 ವಿಕೆಟ್ ಪಡೆದರು. ಆರನ್ ಹಾರ್ಡಿ ಮತ್ತು ಸೀನ್ ಅಬಾಟ್ ತಲಾ ಎರಡು ವಿಕೆಟ್ ಪಡೆದರು. ಮಾರ್ಕಸ್ ಸ್ಟೊಯಿನಿಸ್ ಮತ್ತು ಆಡಮ್ ಝಂಪಾ ತಲಾ ಒಂದು ವಿಕೆಟ್ ಪಡೆದರು.

150 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 16.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 153 ರನ್ ಗಳಿಸುವ ಮೂಲಕ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 12 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 31 ರನ್ ಗಳಿಸಿದರು, ಟಿಮ್ ಡೇವಿಡ್ 14 ಎಸೆತಗಳಲ್ಲಿ 25 ರನ್ ಗಳಿಸಿದರು. ಕ್ಯಾಮೆರಾನ್ ಗ್ರೀನ್ 39 ಎಸೆತಗಳಲ್ಲಿ 2 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 62 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಆರ್ ಸಿಬಿ ಏನು ಮಾಡುತ್ತೆ?
2024 ರ ಐಪಿಎಲ್‌ಗೆ ಮುನ್ನ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡದಿಂದ ಕ್ಯಾಮೆರಾನ್ ಗ್ರೀನ್ ಅವರನ್ನು 18.5 ಕೋಟಿ ರೂಪಾಯಿ ಮೊತ್ತಕ್ಕೆ ಟ್ರೇಡ್ ಮಾಡಿತ್ತು. ಆರಂಭದಲ್ಲಿ ಸತತ ವೈಫಲ್ಯ ಕಂಡಿದ್ದ ಕ್ಯಾಮೆರಾನ್ ಗ್ರೀನ್, ಬಳಿಕ ಆರ್ ಸಿಬಿ ಹಲವು ಪಂದ್ಯಗಳಲ್ಲಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಗ್ರೀನ್ ಉತ್ತಮ ಫಾರ್ಮ್‌ನಲ್ಲಿದ್ದು, ಐಪಿಎಲ್ ಮೆಗಾ ಹರಾಜಿಗೆ ಮುನ್ನ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಫ್ರಾಂಚೈಸಿ ಯೋಚನೆ ಮಾಡಬಹುದು.
ಕ್ಯಾಮೆರಾನ್ ಗ್ರೀನ್ ಭವಿಷ್ಯದ ದೃಷ್ಟಿಯಿಂದ ಆರ್ ಸಿಬಿ ತಂಡಕ್ಕೆ ಬೇಕಾಗಿದ್ದಾರೆ. ಅನುಭವ ಆದಂತೆ ಅವರ ಆಟ ಕೂಡ ಪರಿಣಾಮಕಾರಿಯಾಗಿದೆ. ಬೌಲರ್ ಕೂಡ ಆಗಿರುವ ಕಾರಣ ಉತ್ತಮ ಆಲ್‌ರೌಂಡರ್ ತಂಡಕ್ಕೆ ಬಲ ತಂದುಕೊಡುತ್ತಾರೆ. ಆದರೆ ಆರ್ ಸಿಬಿ ಗ್ರೀನ್ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಇದೆ.












Click it and Unblock the Notifications