Team India: ನ್ಯೂಜಿಲೆಂಡ್ ವಿರುದ್ಧ ಸೋಲು; ಕೊಹ್ಲಿ, ರೋಹಿತ್ ಸೇರಿ ನಾಲ್ವರ ಸ್ಥಾನ ಅಪಾಯದಲ್ಲಿ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋತ ಭಾರತ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಿಟ್ಟಾಗಿದ್ದಾರೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 0-3 ಅಂತರದಲ್ಲಿ ಕಳೆದುಕೊಂಡಿದ್ದು, ಕೆಟ್ಟ ದಾಖಲೆ ಮಾಡಿದೆ. ಭಾರತ ತಂಡದ ಪ್ರದರ್ಶನವನ್ನು ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಬಳಿಕ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಸಜ್ಜಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ದೃಷ್ಟಿಯಿಂದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲುವುದು ಮುಖ್ಯವಾಗಿದೆ. ಅದು ಕೂಡ 4-0 ಅಂತರದಲ್ಲಿ ಗೆದ್ದರೆ ಭಾರತ ಯಾವ ತಂಡದ ಫಲಿತಾಂಶದ ಮೇಲೆ ಅವಲಂಬಿಸದೇ ಫೈನಲ್‌ಗೆ ತಲುಪಬಹುದು. ಒಂದು ವೇಳೆ ಭಾರತ ಆಸ್ಟ್ರೇಲಿಯಾ ನೆಲದಲ್ಲಿ 2 ಟೆಸ್ಟ್ ಪಂದ್ಯ ಗೆದ್ದರೂ ಫೈನಲ್ ತಲುಪಲು ಅವಕಾಶ ಇರುತ್ತದೆ ಆದರೆ ಬೇರೆ ತಂಡಗಳ ಫಲಿತಾಂಶಗಳು ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕಾಗುತ್ತದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಅನೇಕ ದೌರ್ಬಲ್ಯಗಳು ಜಗಜ್ಜಾಹೀರಾಗಿವೆ. ಮುಖ್ಯವಾಗಿ ಸ್ಪಿನ್ ಪಿಚ್‌ಗಳಲ್ಲಿ ಆಡಿ ಅಭ್ಯಾಸವಿರುವ ಭಾರತದ ಆಟಗಾರರು ನ್ಯೂಜಿಲೆಂಡ್ ತಂಡದ ಸ್ಪಿನ್ ದಾಳಿ ಮುಂದೆ ಮಕಾಡೆ ಮಲಗಿದ್ದಾರೆ. ಅದರಲ್ಲೂ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ತಲೆನೋವಾಗಿದೆ.
ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ರವೀಂದ್ರ ಜಡೇಜಾ ಕೂಡ ಮೊದಲ ಎರಡು ಟೆಸ್ಟ್‌ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮುಂಬೈ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ವಿಫಲವಾದರು.
ನಾಲ್ವರು ಆಟಗಾರರಿಗೆ ಕೊನೆಯ ಅವಕಾಶ
ಈ ಟೆಸ್ಟ್ ಸರಣಿ ಸೋಲಿನ ಬಳಿಕ ಬಿಸಿಸಿಐ ಆಟಗಾರರ ಮೇಲೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ನಾಲ್ವರನ್ನು ತಂಡದಿಂದ ಹೊರಗಿಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತ ಯುವ ಟೆಸ್ಟ್ ತಂಡವನ್ನು ಚಿಂತಿಸಲಾಗಿದ್ದು, ಒಂದೇ ಬಾರಿ ನಾಲ್ವರನ್ನು ತಂಡದಿಂದ ಹೊರಗಿಡದೇ ಇದ್ದರೂ, ಇಬ್ಬರ ಸ್ಥಾನಕ್ಕಂತೂ ಕುತ್ತು ಬರುವುದು ಖಚಿತ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದು ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದರೆ, ಟ್ರೋಫಿಯನ್ನು ಗೆದ್ದು ಈ ನಾಲ್ವರಿಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಅವಕಾಶ ಸಿಗಲಿದೆ. ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು, ಮೊದಲ ಟೆಸ್ಟ್ ಪರ್ತ್‌ನಲ್ಲಿ ನಡೆಯಲಿದೆ.












Click it and Unblock the Notifications