ಮುಂದಿನ 5 ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ: ಅರುಣ್ ಧುಮಾಲ್
ಮುಂಬೈ, ನವೆಂಬರ್ 8: ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ದೊಡ್ಡ ಲೀಗ್ ಆಗಲಿದೆ ಎಂದು ಲೀಗ್‌ನ ಹೊಸ ಅಧ್ಯಕ್ಷ ಅರುಣ್ ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಬಿಸಿಸಿಐ ವಿದೇಶಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರಿಗೆ ಅನುಮತಿ ನೀಡದಿರುವ ತನ್ನ ಹಿಂದಿನ ಯೋಜನೆಗೆ ಅಂಟಿಕೊಳ್ಳಲಿದೆ ಎಂದು ಧುಮಾಲ್ ಖಚಿತಪಡಿಸಿದ್ದಾರೆ.
ಐಪಿಎಲ್ ಈಗ ಏನಿದೆ ಅದಕ್ಕಿಂದ ಭವಿಷ್ಯದಲ್ಲಿ ದೊಡ್ಡಲಾಗಲಿದೆ ಮತ್ತು ವಿಶ್ವದ ನಂಬರ್ ಒನ್ ಕ್ರೀಡಾ ಲೀಗ್ ಆಗಲಿದೆ ಪಿಟಿಐಗೆ ಮಾಹಿತಿ ನೀಡಿದ್ದಾರೆ. ನಾವು ಲೀಗ್ ಫ್ಯಾನ್ ಫ್ರೆಂಡ್ಲಿಯಾಗುವುದಕ್ಕೆ ಸಾಕಷ್ಟು ನಾವೀನ್ಯತೆಗಳು ಜಾರಿಗೆ ತರಲು ಎದುರು ನೋಡುತ್ತಿದ್ದೇವೆ. ಸ್ಟೇಡಿಯಂನಲ್ಲಿ ನೋಡುವವರು ಹಾಗೂ ಟಿವಿಯಲ್ಲಿ ನೋಡುವವರಿಗೆ ಉತ್ತಮ ಅನುಭವ ಪಡೆಯುವಂತೆ ಮಾಡುವುದು ನಮ್ಮ ಯೋಜನೆಯಾಗಿದ ಎಂದಿದ್ದಾರೆ.
"ನಾವು ಐಪಿಎಲ್ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಲು ಸಾಧ್ಯವಾದರೆ, ಪ್ರಪಂಚದಾದ್ಯಂತದ ಅಭಿಮಾನಿಗಳು ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುತ್ತಾರೆ. ಇದರಿಂದ ಅಭಿಮಾನಿಗಳು ವಿನಿಯೋಗಿಸುವ ಹಣದಲ್ಲೂ ಉಳಿತಾಯ ಮಾಡಬಹುದು " ಎಂದು ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐ ಕಳೆದ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳನ್ನು ಲೀಗ್‌ಗೆ ಸೇರಿಸಿಕೊಳ್ಳುವ ಮೂಲಕ 12000 ಕೋಟಿ ರೂ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳ ಸಂಖ್ಯೆ 10ನ್ನು ಮೀರುವುದಿಲ್ಲ. ಪ್ರಸ್ತುತ ವರ್ಷ 74 ಪಂದ್ಯಗಳನ್ನಾಡಿಸಲಾಗಿದೆ. ಮುಂಬರುವ ಆವೃತ್ತಿಗಳಲ್ಲಿ 94 ಪಂದ್ಯಗಳಿಗೆ ಏರಿಕೆಯಾಗಲಿದೆ. 10 ತಂಡಗಳಾದ ಮೇಲೆ ಐಪಿಎಲ್‌ನ ಐದು ವರ್ಷಗಳ ಮಾಧ್ಯಮ ಪ್ರಸಾರದ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ. ಟಿವಿ, ಡಿಜಿಟಲ್ ಸೇರಿ ನೇರಪ್ರಸಾರ ಹಕ್ಕು ಬರೋಬ್ಬರಿ 48,390 ಕೋಟಿ ರೂ. ಮೊತ್ತವನ್ನು ಬಿಸಿಸಿಐ ಪಡೆದುಕೊಂಡಿದೆ.

ಐಪಿಎಲ್ ತಂಡಗಳ ಸಂಖ್ಯೆ ಏರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, "ಐಪಿಎಲ್‌ನಲ್ಲಿ 10 ತಂಡಗಳು ಮಾತ್ರ ಇರಲಿವೆ. ಅದನ್ನೂ ಮೀರಿದರೆ ತುಂಬಾ ಟೂರ್ನಿ ಆಯೋಜನೆ ಕಷ್ಟವಾಗಲಿದೆ. ನಾವು ಮೊದಲೆರಡು ಆವೃತ್ತಿಗಳಲ್ಲಿ 74 ಪಂದ್ಯಗಳನ್ನು ನಿರೀಕ್ಷೆ ಮಾಡಿದ್ದೆವು. ನಂತರ 84 ಹಾಗೂ ಮಾಧ್ಯಮಗಳ ಹಕ್ಕಗಳ ಒಪ್ಪಂದದ ಕೊನೆಯ ಆವೃತ್ತಿಯಲ್ಲಿ 94 ಪಂದ್ಯಗಳನ್ನಾಡಲಿದೆ. ಇದು ಬಹುಶಃ ದೊಡ್ಡ ಇವೆಂಟ್ ಆಗಲಿದೆ" ಎಂದು ಧುಮಾಲ್ ಹೇಳಿದರು.
ವಿದೇಶಿ ಲೀಗ್‌ನಲ್ಲಿ ಭಾರತೀಯರಿಗೆ ಆಡಲು ಅನುಮತಿ ಇಲ್ಲ
ಬಿಸಿಸಿಐ ತನ್ನ ಆಟಗಾರರನ್ನು ವಿದೇಶಿ ಲೀಗ್‌ಗಳಲ್ಲಿ ಆಡುವುದಕ್ಕೆ ಅನುಮತಿಸದಿರುವ ತನ್ನ ಪ್ರಸ್ತುತ ನೀತಿಯನ್ನು ಬದಲಾಯಿಸುವ ಯಾವುದೇ ಯೋಜನೆ ಹೊಂದಿಲ್ಲ. ಇದು ಗುತ್ತಿಗೆ ಹೊಂದಿರುವ ಆಟಗಾರರಾಗಿರಬಹುದು ಅಥವಾ ಒಪ್ಪಂದದಲ್ಲಿ ಇಲ್ಲದಿರುವ ಆಟಗಾರರಾಗಿರಬಹುದು ಎಂದು ಧುಮಾಲ್ ತಿಳಿಸಿದ್ದಾರೆ.
ನಮ್ಮ ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರರು ಯಾವುದೇ ಲೀಗ್‌ಗಳಲ್ಲಿ ಆಡದಿರುವುದು ಬಿಸಿಸಿಐ ನಿರ್ಧಾರವಾಗಿದೆ. ಏಕೆಂದರೆ ವರ್ಷದಲ್ಲಿ ಸಾಕಷ್ಟು ಕ್ರಿಕೆಟ್ ಆಡಲಾಗುತ್ತದೆ. ಇದನ್ನು ಮನದಲ್ಲಿಟ್ಟುಕೊಂಡು ಆಟಗಾರರ ಒಳ್ಳೆಯದನ್ನು ಬಯಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಭಾರತದ ಪರ ಆಡಬೇಕೆಂಬ ಆಸೆ ಹೊಂದಿರುವ ಗುತ್ತಿಗೆ ರಹಿತ ಆಟಗಾರರಿಗೂ ಅನ್ವಯಿಸುತ್ತದೆ ಎಂದು ಧುಮಾಲ್ ತಿಳಿಸಿದ್ದಾರೆ.












Click it and Unblock the Notifications