ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದ ಭಾನುವಾರ; ಮೂರು ಪಂದ್ಯ ಸೋತ ಭಾರತ
ಭಾನುವಾರ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಬೇಕಾದ ಕೆಟ್ಟ ದಿನವಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಪಂದ್ಯಗಳಲ್ಲಿ ಭಾರತ ಒಂದೇ ದಿನ ಸೋಲನುಭವಿಸಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತ ನಿರಾಸೆ ಅನುಭವಿಸಿದರೆ, ಆಸ್ಟ್ರೇಲಿಯಾ ಮಹಿಳಾ ತಂಡ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ ಸೋಲನುಭವಿಸಿದ್ದು ಭಾರತ ಕ್ರಿಕೆಟ್ ಅಭಿಮಾನಿಗಳ ಬೇಸರವನ್ನು ಮತ್ತಷ್ಟು ಹೆಚ್ಚಿಸಿತು.
ಮೊದಲನೆಯದಾಗಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಬೌಲಿಂಗ್ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಟ್ರಾವಿಸ್ ಹೆಡ್ ಅಮೋಘ ಶತಕ, ಮಿಚೆಲ್ ಸ್ಟಾರ್ಕ್, ಪಾಟ್ ಕಮ್ಮಿನ್ಸ್ ಬಿಗಿ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಎರಡನೇ ಪಂದ್ಯ ಗೆದ್ದುಕೊಂಡಿತು. 5 ಪಂದ್ಯಗಳ ಸರಣಿಯಲ್ಲಿ 1-1 ಸಬಲ ಸಾಧಿಸಿದ್ದು, 3ನೇ ಟೆಸ್ಟ್ ಗಬ್ಬಾದಲ್ಲಿ ನಡೆಯಲಿದೆ.

ಭಾರತ ಮಹಿಳಾ ತಂಡಕ್ಕೆ ಸೋಲು
ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಸೋತು ಹೋದರೆ, ಬ್ರಿಸ್ಬೇನ್‌ನಲ್ಲಿ ನಡೆದ ಮಹಿಳಾ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಕೂಡ ಭಾರತ ಆಸ್ಟ್ರೇಲಿಯಾಗೆ ಶರಣಾಗಿದೆ. ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಮಹಿಳಾ ತಂಡದ ವಿರುದ್ಧ 122 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 371 ರನ್ ಗಳಿಸಿತು. ಎಲ್ಲಿಸ್ ಪೆರ್‍ರಿ 75 ಎಸೆತಗಳಲ್ಲಿ 7 ಬೌಂಡರಿ 6 ಸಿಕ್ಸರ್ ಸಹಿತ 105 ರನ್ ಗಳಿಸಿದರು. ಜಾರ್ಜಿಯಾ ವೋಲ್ 87 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 101 ರನ್ ಗಳಿಸಿದರು. ಈ ಬೃಹತ್ ಮೊತ್ತ ಬೆನ್ನತ್ತಿದ ಭಾರತ 44.5 ಓವರ್ ಗಳಲ್ಲಿ 249 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಏಷ್ಯಾಕಪ್ ಫೈನಲ್‌ನಲ್ಲಿ ಸೋಲು
ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಕೂಡ ಭಾರತ ಸೋಲು ಕಂಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ಮೂಡಿಸಿತು. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 59 ರನ್‌ಗಳಿಂದ ಗೆಲುವು ಸಾಧಿಸಿದ ಬಾಂಗ್ಲಾದೇಶ ಏಷ್ಯಾಕಪ್ ಗೆದ್ದುಕೊಂಡಿತು.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.1 ಓವರ್ ಗಳಲ್ಲಿ 198 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. 199 ರನ್‌ಗಳ ಗುರಿ ಬೆನ್ನತ್ತಿದ ಭಾರತ 35.2 ಓವರ್ ಗಳಲ್ಲಿ 139 ರನ್ ಗಳಿಸುಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.












Click it and Unblock the Notifications