Ind vs Aus: ಮೂರನೇ ದಿನ ಭಾರತದ ಮಾನ ಕಾಪಾಡಿದ ಮಳೆ! ಇನ್ನೆರಡು ದಿನ ಭಾರತಕ್ಕೆ ನಿಜವಾದ 'ಟೆಸ್ಟ್'
ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿರವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿದ್ದು ಭಾರತಕ್ಕೆ ವರದಾನವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಬಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 51 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು ಎಂದುಕೊಂಡರೂ ಇನ್ನೂ ಎರಡು ದಿನ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ.
ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಶತಕದ ನೆರವಿನಿಂದ ಆಸ್ಟ್ರೇಲಿಯಾ 445 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 401 ರನ್ ಗಳಿಸಿದ್ದ ಆಸ್ಟ್ರೇಲಿಯಾ ಮೂರನೇ ದಿನ 44 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡರು. ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆಯುವ ಮೂಲಕ ಭಾರತದ ಟಾಪ್ ಬೌಲರ್ ಎನಿಸಿಕೊಂಡರು. ಬುಮ್ರಾ 2 ವಿಕೆಟ್ ಪಡೆದರೆ ಆಕಾಶ್ ದೀಪ್ ಮತ್ತು ನಿತೀಶ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಆರಂಭಿಕ ಆಘಾತ
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಯಶಸ್ವಿ ಜೈಸ್ವಾಲ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ್ದು ನೋಡಿ ಖುಷಿ ಪಟ್ಟಿತ್ತು. ಆದರೆ ಎರಡನೇ ಎಸೆತದಲ್ಲೇ ಜೈಸ್ವಾಲ್ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮಿಚೆಲ್ ಮಾರ್ಷ್‌ಗೆ ಕ್ಯಾಚ್ ಕೊಟ್ಟು ಔಟಾದರು. ಬಳಿಕ ಬಂದ ಶುಭಮನ್ ಗಿಲ್ ಕೂಡ 3 ಎಸೆತಗಳಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. 3 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್ ಬೌಲಿಂಗ್‌ನಲ್ಲಿ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ಕೊಟ್ಟು ಔಟಾದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಕೆಎಲ್ ರಾಹುಲ್ ಮತ್ತೊಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಈ ಹಂತದಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು, ಬಳಿಕ ಪಂದ್ಯ ಆರಂಭವಾಗುತ್ತಿದ್ದಂತೆ 9 ರನ್ ಗಳಿಸಿದ್ದ ರಿಷಬ್ ಪಂತ್ ನಾಯಕ ಪಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ರೋಹಿತ್ ಶರ್ಮಾ- ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದು ಮತ್ತೆ ಮಳೆ ಆರಂಭವಾದ ಕಾರಣ ಮೂರನೇ ದಿನದಾಟವನ್ನು ಇನ್ನೂ 11 ಓವರ್ ಬಾಕಿ ಇದ್ದಂತೆ ಮುಗಿಸಲಾಯಿತು. ಇನ್ನೂ 11 ಓವರ್ ಆಸ್ಟ್ರೇಲಿಯಾ ಬೌಲಿಂಗ್ ಮಾಡಿದ್ದರೆ ಭಾರತ ಮತ್ತೆ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿತ್ತು, ಮಳೆ ಸದ್ಯ ಭಾರತದ ಮಾನ ಉಳಿಸಿದೆ.
ಇನ್ನೆರಡು ದಿನ ನಿಜವಾದ ಟೆಸ್ಟ್
ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತ ಈ ಪಂದ್ಯವನ್ನು ಗೆಲ್ಲಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ ಎನಿಸುತ್ತಿದ್ದು ಭಾರತದ ಬ್ಯಾಟರ್ ಗಳು ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತು ಆಡಿದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಇನ್ನೆರಡು ದಿನ ಭಾರತಕ್ಕೆ ನಿಜವಾದ ಟೆಸ್ಟ್ ಇದ್ದು, ಇದರಲ್ಲಿ ಪಾಸ್ ಆಗುತ್ತಾ ಫೇಲ್ ಆಗುತ್ತಾ ಎಂದು ನೋಡಬೇಕಿದೆ.












Click it and Unblock the Notifications