India vs Pakistan: ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ
ಚೀನಾದಲ್ಲಿ ನಡೆಯುತ್ತಿರುವ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024ರ ಹಾಕಿ ಪಂದ್ಯಾವಳಿಯಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಹಾಕಿ ತಂಡ ಗೆಲುವಿನ ಓಟವನ್ನು ಮುಂದುವರೆಸಿದೆ. ಚೀನಾದ ಮೊಕಿಯಲ್ಲಿ ನಡೆದ ಪುರುಷರ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿಯ ಪೂಲ್-ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತದ ಉತ್ತಮ ಆಟದ ಎದುರು ಪಾಕಿಸ್ತಾನ ಪಡೆ ಸೋಲೊಪ್ಪಿಕೊಂಡಿತು.
ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಹುಲುನ್‌ಬುಯರ್ ಸಿಟಿಯ ಬೇಸ್ ಕ್ಯಾಂಪ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರಾಕ್ರಮ ಪ್ರದರ್ಶಿಸಿತು. ಭಾರತ ಈ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಈವರೆಗೂ 19 ಗೋಲುಗಳನ್ನು ಬಾರಿಸಿದೆ. ಈವರೆಗೂ 5 ಪಂದ್ಯಗಳನ್ನು ಆಡಿರುವ ಭಾರತ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಮೊದಲ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ರೋಚಕ ಹೋರಾಟ ನಡೆಸಿದವು. ಮೊದಲ ಕ್ವಾರ್ಟರ್ ಮುಗಿಯಲು ಇನ್ನೂ 7 ನಿಮಿಷ ಬಾಕಿ ಇರುವಾಗ ಪಾಕಿಸ್ತಾನ ಮೊದಲ ಗೋಲು ಗಳಿಸುವ ಮೂಲಕ 1-0 ಮುನ್ನಡೆ ಸಾಧಿಸಿತು. ಆದರೆ ಮೊದಲ ಕ್ವಾರ್ಟರ್ ಮುಗಿಯಲು ಇನ್ನೂ 2.35 ನಿಮಿಷ ಬಾಕಿ ಇರುವಾಗ ಪೆನಾಲ್ಟಿ ಕಾರ್ನರ್ ಅನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತನೆ ಮಾಡುವ ಮೂಲಕ 1-1 ರಲ್ಲಿ ಸಮಬಲಗೊಂಡಿತು. 2ನೇ ಕ್ವಾರ್ಟರ್ ಆರಂಭವಾಗುತ್ತಿದ್ದಂತೆ ಭಾರತ ಮತ್ತೆ ಪರಾಕ್ರಮ ಮೆರೆಯಿತು, ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತನೆ ಮಾಡುವ ಮೂಲಕ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ನಾಲ್ಕನೇ ಕ್ವಾರ್ಟರ್ ನಲ್ಲಿ ಕೂಡ ಎರಡೂ ತಂಡಗಳು ಗೋಲು ಗಳಿಸುವ ಅವಕಾಶಗಳನ್ನು ತಪ್ಪಿಸಿಕೊಂಡವು. ಅಂತಿಮವಾಗಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಸೆಮಿಫೈನಲ್ ತಲುಪಿರುವ ಭಾರತ ಈ ಬಾರಿ ಕೂಡ ಪ್ರಸಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಗುರುವಾರ ನಡೆದ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಭಾರತ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ವರ್ಷ ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.












Click it and Unblock the Notifications