India vs Pakistan: ಕೆಎಲ್ ರಾಹುಲ್‌ಗೆ ಅವಕಾಶ: ಹೇಗಿರಲಿದೆ ಭಾರತ ಪ್ಲೇಯಿಂಗ್ 11?
ಏಷ್ಯಾಕಪ್ 2023ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ದ ಎರಡನೇ ಪಂದ್ಯವಾಡಲು ಸಜ್ಜಾಗಿದೆ. ಲೀಗ್ ಹಂತದ ಮೊದಲನೇ ಪಂದ್ಯ ಮಳೆಯಿಂದ ರದ್ದಾದ ಬಳಿಕ ಸೂಪರ್ 4 ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ. ಸೆಪ್ಟೆಂಬರ್ 10ರಂದು ಕೊಲಂಬೋದಲ್ಲಿ ಈ ಪಂದ್ಯ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ಗೆ ದೊಡ್ಡ ತಲೆನೋವು ಎದುರಾಗಿದ್ದು, ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಲಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು ಯಾರು ಬೆಂಚ್ ಕಾಯಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

ಪಾಕಿಸ್ತಾನ ತಂಡ ಈ ಬಾರಿ ಏಷ್ಯಾಕಪ್‌ನಲ್ಲಿ ಅಜೇಯವಾಗಿ ಉಳಿದಿದೆ. ಲೀಗ್ ಹಂತದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದ ಬಳಿಕ, ಭಾರತದ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು, ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ಭಾರತದ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಜಸ್ಪ್ರೀತ್ ಬುಮ್ರಾ ಏಷ್ಯಾ ಕಪ್ 2023 ರಲ್ಲಿ ಇದುವರೆಗೂ ಬೌಲಿಂಗ್ ಮಾಡಿಲ್ಲ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ನಂತರ ಬುಮ್ರಾ ಮುಂಬೈಗೆ ಮರಳಿದ್ದರು, ಗಂಡು ಮಗುವಿನ ತಂದೆಯಾದ ಖುಷಿಯಲ್ಲಿರುವ ಅವರು ಮತ್ತೆ ತಂಡವನ್ನು ಸೇರಿಕೊಂಡಿದ್ದು, ಪಾಕ್ ವಿರುದ್ಧ ಮಿಂಚಲು ಸಿದ್ಧವಾಗಿದ್ದಾರೆ.
ಬುಮ್ರಾ ಅನುಪಸ್ಥಿತಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವಕಾಶ ಪಡೆದುಕೊಂಡಿದ್ದರು. ಈಗ ಯಾರನ್ನು ತಂಡದಿಂದ ಹೊರಗಿಡಬೇಕು ಯಾರಿಗೆ ಅವಕಾಶ ನೀಡಬೇಕು ಎನ್ನುವ ಪ್ರಶ್ನೆ ಎದುರಾಗಿದೆ.
ಬುಮ್ರಾಗೆ ಸ್ಥಾನ ಬಿಟ್ಟುಕೊಡುವವರು ಯಾರು
ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದರೂ ಅವರು ಹೆಚ್ಚಿನ ರನ್ ಬಿಟ್ಟುಕೊಟ್ಟಿರಲಿಲ್ಲ. ಮೊಹಮ್ಮದ್ ಸಿರಾಜ್ ನೇಪಾಳ ವಿರುದ್ಧ 61 ರನ್ ಬಿಟ್ಟುಕೊಟ್ಟರು 3 ಪ್ರಮುಖ ವಿಕೆಟ್ ಪಡೆದು ಮಿಂಚಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಶಾರ್ದೂಲ್ ಠಾಕೂರ್ ಪಾಕಿಸ್ತಾನ, ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಅವರು ಹೆಚ್ಚು ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ನೇಪಾಳ ವಿರುದ್ಧದ ಪಂದ್ಯದಲ್ಲಿ ಕೂಡ ಅವರ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ.
ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್?
ಕೆಎಲ್ ರಾಹುಲ್ ಕೂಡ ತಂಡಕ್ಕೆ ಮರಳಿದ್ದು ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ನಡುವೆ ಯಾರುವ ಅವಕಾಶ ಪಡೆಯುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಒತ್ತಡದ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
ಇಶಾನ್ ಕಿಶನ್ ತಮ್ಮ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ 52, 55, 77 ಮತ್ತು 82 ರನ್ ಗಳಿಸಿದ್ದಾರೆ, ಇದರಿಂದಾಗಿ ಅವರನ್ನು ಕೈಬಿಡಲು ಸಾಧ್ಯವಾಗಲಿಲ್ಲ. ಎಡಗೈ ಬ್ಯಾಟರ್ ಆಗಿರುವುದು ಕಿಶನ್ ಅವರ ಮತ್ತೊಂದು ಮುಖ್ಯ ಅಂಶವಾಗಿದ್ದು. ಅವರು ಪಾಕ್ ವಿರುದ್ಧ ಕಣಕ್ಕಿಳಿಯುವುದು ಖಚಿತವಾಗಿದೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್,
ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ
ಮೊಹಮ್ಮದ್ ಶಮಿ/ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.












Click it and Unblock the Notifications