Asia Cup 2023: ಎದುರಾಳಿಗಳಿಗೆ ದ್ರಾವಿಡ್ ವಾರ್ನಿಂಗ್: ಮೂರು ಬಾರಿ ಪಾಕ್ ಜೊತೆ ಮುಖಾಮುಖಿ ಫಿಕ್ಸ್!
2023ರ ಏಷ್ಯಾಕಪ್ ಪಂದ್ಯಾವಳಿ ವೇಳಾಪಟ್ಟಿ ಬಿಡುಗಡೆಯಾಗಿದೆ, ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಮುಖಾಮುಖಿಯಾಗಲಿವೆ.
ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನದಲ್ಲಿ ಕೂಡ ಪಂದ್ಯಗಳು ನಡೆಯಲಿದ್ದು, ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಕಳೆದ ಬಾರಿ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿತ್ತು, ಈ ಬಾರಿ ಭಾರತ, ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾಗಿವೆ.

ಏಷ್ಯಾಕಪ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಎದುರಾಳಿ ತಂಡಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಾರಿ ಭಾರತ ತಂಡ ಫೈನಲ್ ತಲುಪುವುದಲ್ಲದೇ ಪ್ರಶಸ್ತಿ ಗೆಲ್ಲಲಿದೆ ಎಂದು ದ್ರಾವಿಡ್ ಹೇಳಿದ್ದು, ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತ ಪಾಕಿಸ್ತಾನ ಮೂರು ಬಾರು ಮುಖಾಮುಖಿ
ಭಾರತ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು ಗುಂಪು ಹಂತದಲ್ಲಿ ಮೊದಲ ಪಂದ್ಯ ಆಡುವುದು ಫಿಕ್ಸ್ ಆಗಿದೆ. ಭಾರತ, ಪಾಕಿಸ್ತಾನ ಮತ್ತು ನೇಪಾಳ ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಬಿ ಗುಂಪಿನಲ್ಲಿವೆ.
ಒಂದು ಗುಂಪಿನಲ್ಲಿ ಎರಡು ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿವೆ, ಬಹುತೇಕ ಭಾರತ ಮತ್ತು ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶಿಸಲಿದ್ದು, ಸೆಪ್ಟೆಂಬರ್ 10ರಂದು ಎ1 ಮತ್ತು ಎ2 ತಂಡದ ನಡುವೆ ಸೂಪರ್ 4 ಪಂದ್ಯ ನಡೆಯಲಿದೆ ಈ ಪಂದ್ಯದಲ್ಲಿ ಕೂಡ ಭಾರತ ಪಾಕಿಸ್ತಾನ ಮುಖಾಮುಖಿಯಾಗುದು ಬಹುತೇಕ ಖಚಿತವಾಗಿದೆ.
ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಉತ್ತಮ ಪ್ರದರ್ಶನ ನೀಡಿದರೆ, ಫೈನಲ್ ತಲುಪುವ ಅವಕಾಶ ಇದ್ದು, ಸೆಪ್ಟೆಂಬರ್ 17ರಂದು ಉಭಯ ತಂಡಗಳು ಫೈನಲ್ ಆಡುವ ಸಾಧ್ಯತೆ ಇದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಇದೇ ಆಶಯ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗಬೇಕು ಎಂದು ಇಚ್ಚಿಸಿದ್ದಾರೆ.
ದ್ರಾವಿಡ್ ಹೇಳಿದ್ದೇನು?
ಕೋಚ್ ದ್ರಾವಿಡ್ ಮಾತನಾಡಿ, "ವೇಳಾಪಟ್ಟಿ ಇದೇ ಅಂತಿಮ ಎಂದುಕೊಳ್ಳುತ್ತೇನೆ, ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಮೊದಲ ಎರಡು ಪಂದ್ಯಗಳಲ್ಲಿ ನಾವು ನೇಪಾಳ ಮತ್ತು ಪಾಕಿಸ್ತಾನದ ವಿರುದ್ಧ ಆಡುತ್ತೇವೆ. ಉತ್ತಮ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿ ಗೆಲ್ಲಬೇಕು, ಪಾಕ್ ವಿರುದ್ಧ ಮೂರು ಬಾರಿ ಆಡಿದರೆ ಉತ್ತಮವಾಗಿರುತ್ತದೆ" ಎಂದು ಹೇಳಿದರು.
2022ರ ಆವೃತ್ತಿಯಲ್ಲಿ ಏಷ್ಯಾಕಪ್‌ನ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾಗಿದೆ. ಕಳೆದ ಆವೃತ್ತಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿತ್ತು, ಈ ಬಾರಿ ಕಪ್ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಭಾರತ ಈವರೆಗೂ 7 ಬಾರಿ ಏಷ್ಯಾಕಪ್ ಗೆದ್ದುಕೊಂಡಿದೆ. ಕಳೆದ ಬಾರಿ ಶ್ರೀಲಂಕಾ ಪಾಕಿಸ್ತಾನವನ್ನು ಮಣಿಸಿ ಕಪ್ ಗೆದ್ದುಕೊಂಡಿದೆ. ಕಳೆದ ಬಾರಿ ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆದಿದ್ದರೆ, ಈ ಬಾರಿ ಏಕದಿನ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.












Click it and Unblock the Notifications