India vs Bangladesh: ಚೆಪಾಕ್‌ನಲ್ಲಿ ಅಶ್ವಿನ್-ಜಡೇಜಾ ಮೋಡಿ; ಮೊದಲ ದಿನ 336 ರನ್ ಕಲೆಹಾಕಿದ ಭಾರತ
ಚೆಪಾಕ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತದ ಸ್ಪಿನ್ನರ್ ಜೋಡಿ ಮೋಡಿದೆ, ಆದರೆ ಬೌಲಿಂಗ್‌ನಲ್ಲಿ ಅಲ್ಲ, ಬದಲಾಗಿ ಬ್ಯಾಟಿಂಗ್‌ನಲ್ಲಿ! ಹೌದು, ಅಗ್ರ ಕ್ರಮಾಂಕದ ರೋಹಿತ್, ಗಿಲ್, ಕೆಎಲ್ ರಾಹುಲ್, ಕೊಹ್ಲಿ ಕೂಡ ರನ್ ಗಳಿಸುವಲ್ಲಿ ವಿಫಲವಾದಾಗ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಸರೆಯಾದರು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಕೂಡ 6 ರನ್ ಗಳಿಸಿ ಔಟ್ ಆದರು.

ಬಳಿಕ ಜೊತೆಯಾದ ಜೈಸ್ವಾಲ್ ಮತ್ತು ರಿಷಬ್ ಪಂತ್ 62 ರನ್‌ಗಳ ಜೊತೆಯಾಟ ಆಡಿದರು. ರಿಷಬ್ ಪಂತ್ 39 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ 16 ರನ್ ಗಳಿಸಿ ಔಟಾದರು. ಯಶಸ್ವಿ ಜೈಸ್ವಾಲ್ 56 ರನ್ ಗಳಿಸಿದ್ದಾಗ ಔಟಾದರು. 144 ರನ್ ಗಳಿಸುವ ವೇಳೆಗೆ ಭಾರತ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಅಶ್ವಿನ್-ಜಡೇಜಾ ಮೋಡಿ
ಭಾರತ ಸಂಕಷ್ಟದಲ್ಲಿದ್ದಾಗ ಜೊತೆಯಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಾಂಗ್ಲಾದೇಶ ಬೌಲರ್ ಗಳನ್ನು ದಿನದ ಅಂತ್ಯದವರೆಗೂ ಕಾಡಿದರು. ಭಯವಿಲ್ಲದೇ ಬ್ಯಾಟ್ ಬೀಸಿದ ಇಬ್ಬರು ಆಲ್‌ರೌಂಡರ್ ಗಳು ದಿನದಾಂತ್ಯದ ವೇಳೆಗೆ ಭಾರತ ಮೇಲುಗೈ ಸಾಧಿಸುವಂತೆ ಮಾಡಿದರು.
ರವೀಂದ್ರ ಜಡೇಜಾ 117 ಎಸೆತಗಳಲ್ಲಿ 10 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 86 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಟೆಸ್ಟ್‌ನಲ್ಲಿ ಶತಕ ಗಳಿಸಿ ದಾಖಲೆ ಬರೆದರು. ಚೆಪಾಕ್‌ನಲ್ಲಿ ಇದು ಅವರ 2ನೇ ಟೆಸ್ಟ್ ಶತಕವಾಗಿದೆ. 112 ಎಸೆತಗಳಲ್ಲಿ 10 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 102 ರನ್ ಗಳಿಸಿದ್ದು, 2ನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಹಸನ್ ಮಹ್ಮುದ್ 4 ವಿಕೆಟ್ ಪಡೆದು ಬಾಂಗ್ಲಾದೇಶದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರವಿಂದ್ರನ್ ಅಶ್ವಿನ್ ಮತ್ತೊಮ್ಮೆ ತಾವು ಗ್ರೇಟ್ ಆಲ್‌ರೌಂಡರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.












Click it and Unblock the Notifications