IPL 2024: ಸನ್‌ರೈಸರ್ಸ್ ವಿರುದ್ಧ ಸೋತರೂ ಆರ್‌ಸಿಬಿಗಿದೆ ಪ್ಲೇಆಫ್ ಪ್ರವೇಶಿಸುವ ಅವಕಾಶ; ಏನು ಹೇಳುತ್ತೆ ಲೆಕ್ಕಾಚಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 25 ರನ್‌ಗಳ ಸೋಲು ಕಂಡಿದೆ. ಈ ಸೋಲು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೂ ಈ ತಂಡದ ಫ್ಯಾನ್ಸ್‌ಗೆ ಖುಷಿ ಸುದ್ದಿಯೊಂದು ಇದೆ. ಈ ಬಾರಿಯ ಐಪಿಎಲ್‌ನ ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರಗಳು ಆರಂಭವಾಗಿವೆ. ಏಳು ಪಂದ್ಯಗಳಲ್ಲಿ ಕೇವಲ ಒಂದೇ ಪಂದ್ಯ ಗೆದ್ದಿರುವ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಹೇಗೆ ಕಾಣುತ್ತಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಸೋಮವಾರ ನಡೆದ ಪ್ರಸಕ್ತ ಐಪಿಎಲ್ ಋತುವಿನ 30ನೇ ಪಂದ್ಯದಲ್ಲಿ ಟಾಸ್ ಸೋತರೂ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 287 ರನ್ ಸಿಡಿಸಿತು. ಸನ್ ತಂಡದ ಪರ ಇಂಪ್ಯಾಕ್ಟ್ ಪ್ಲೇಯರ್ ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೇನ್ 31 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 262 ರನ್ ಸೇರಿಸಿತು. ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಕೇವಲ 35 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 83 ರನ್ ಸಿಡಿಸಿದರು. ಫಾಫ್ ಡುಪ್ಲೇಸಿಸ್ 28 ಎಸೆತಗಳಲ್ಲಿ 62 ರನ್ ಬಾರಿಸಿ ಅಬ್ಬರಿಸಿದರು. ಈ ಸೋಲಿನಿಂದ ಆರ್‌ಸಿಬಿ ಪ್ಲೇ ಆಫ್ ಕನಸು ದೂರ ಸರಿದಂತೆ ಕಾಣುತ್ತಿದೆ.

ಕೇವಲ ಎರಡು ಅಂಕ
ಪ್ಲೇ ಆಫ್ ಕನಸನ್ನು ನನಸಾಗಿಸಲು ಆರ್‌ಸಿಬಿ ಮುಂದಿನ ಎಲ್ಲ ಪಂದ್ಯಗಳಲ್ಲೂ ಅಮೋಘ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನದ ಅನಿವಾರ್ಯತೆ ಇದೆ. ಇರುವ ಸಂಪನ್ಮೂಲಗಳನ್ನೇ ಸರಿಯಾಗಿ ಬಳಸಿಕೊಂಡು ಆರ್‌ಸಿಬಿ ಗೆಲುವಿನ ಲಯಕ್ಕೆ ಹೇಗೆ ಮರಳ ಬೇಕು ಎಂಬುದನ್ನು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇದುವರೆಗೆ 7 ಪಂದ್ಯಗಳಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಸೋಲುಗಳನ್ನು ಕಂಡಿದೆ. ಆರ್‌ಸಿಬಿ, ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಅತ್ಯಂತ ಅಂಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಆದರೆ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಪ್ಲೇಆಫ್ ತಲುಪುವುದು ಹೇಗೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಆದರೆ ಇದು ತುಂಬಾ ಕಷ್ಟಕರವಾಗಿರುತ್ತದೆ. ಈ ತಂಡವು ಮೊದಲ 7 ಪಂದ್ಯಗಳಲ್ಲಿ ಕೇವಲ 2 ಅಂಕಗಳನ್ನು ಹೊಂದಿದೆ. ಆರ್‌ಸಿಬಿಗೆ ಇನ್ನು 7 ಪಂದ್ಯಗಳು ಉಳಿದಿವೆ, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂಬರುವ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಒಟ್ಟು 16 ಅಂಕಗಳನ್ನು ಕಲೆ ಹಾಕಿದ ಹಾಗೆ ಹಾಕುತ್ತದೆ. ಬರೀ ಅಂಕಗಳನ್ನು ಕಲೆ ಹಾಕುವುದು ಅಷ್ಟೇ ಅಲ್ಲ ರನ್ ರೇಟ್‌ನ್ನು ಸಹ ಸುಧಾರಿಸಿಕೊಳ್ಳಬೇಕಿದೆ. ಇದಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತರ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿರ ಬೇಕಿದೆ. ಅಂದರೆ, ಈಗ ಪರಿಸ್ಥಿತಿ RCB ನಿಯಂತ್ರಣದಲ್ಲಿಲ್ಲ, ಆದ್ದರಿಂದ ಈ ತಂಡಕ್ಕೆ ಪ್ಲೇಆಫ್ ತಲುಪುವುದು ತುಂಬಾ ಸವಾಲಿನ ಸಂಗತಿಯಾಗಿದೆ.












Click it and Unblock the Notifications