Ambati Rayudu: ಅಂದು ವಿರಾಟ್ ಕೊಹ್ಲಿ ಇಂದು ಅಂಬಾಟಿ ರಾಯುಡು!
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಯುವಿ ಪಡೆ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅಬ್ಬರಿಸುವ ಮೂಲಕ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತ ಚಾಂಪಿಯನ್ಸ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿತು. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್‌ಗಳನ್ನು ಕಲೆಹಾಕಿತು.

157 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 19.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವ ಮೂಲಕ ಗೆದ್ದು ಬೀಗಿತು. ಅಂಬಾಟಿ ರಾಯುಡು ಅರ್ಧಶತಕ ಮತ್ತು ಯೂಸುಫ್ ಪಠಾಣ್ ಅವರ ಸ್ಫೋಟಕ ಆಟ ಭಾರತದ ಗೆಲುವಿಗೆ ಕಾರಣವಾಯಿತು.
ಅಂದು ಕೊಹ್ಲಿ ಇಂದು ರಾಯುಡು
ಅಂಬಾಟಿ ರಾಯುಡು ಫೈನಲ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ರಾಬಿನ್ ಉತ್ತಪ್ಪ, ಸುರೇಶ್ ರೈನಾ ಬೇಗನೆ ಔಟಾದ ಬಳಿಕ ರಾಯುಡು ತಾಳ್ಮೆಯಿಂದ ಆಡಿದರು, 3ನೇ ವಿಕೆಟ್‌ಗೆ ಗುರುಕೀರತ್ ಸಿಂಗ್ ಜೊತೆಗೆ 60 ರನ್ ಕಲೆಹಾಕುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ಇಡೀ ಟೂರ್ನಿಯಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ರಾಯುಡು ಫೈನಲ್ ಪಂದ್ಯದಲ್ಲಿ ಮಿಂಚುವ ಮೂಲಕ, ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅನ್ನು ನೆನಪಿಸಿದರು.
ಟಿ20 ವಿಶ್ವಕಪ್ 2024ರ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ, ಸೆಮಿಫೈನಲ್‌ನಲ್ಲಿ ದೊಡ್ಡ ರನ್ ಗಳಿಸುವಲ್ಲಿ ವಿಫಲವಾಗಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಭಾರತ ಸವಾಲಿನ ಮೊತ್ತ ಕಲೆಹಾಕಲು ಕಾರಣವಾಗಿದ್ದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್‌ರಂತಹ ಪ್ರಮುಖ ಬ್ಯಾಟರ್ ಔಟಾದಾಗ ಕೊಹ್ಲಿ ಕ್ರೀಸ್ ಕಚ್ಚಿ ನಿಂತು ಆಡಿದ್ದರು.
ವಿಶ್ವ ಚಾಂಪಿಯನ್ಸ್ ಆಫ್ ಲೆಜೆಂಡ್ಸ್‌ನಲ್ಲಿ ಫೈನಲ್‌ನಲ್ಲಿ ರಾಯುಡು ಕೂಡ ಇದೇ ಕೆಲಸ ಮಾಡಿದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಚಾಂಪಿಯನ್ಸ್ ತಂಡ ಕಪ್ ಗೆದ್ದು ಬೀಗಿತು.












Click it and Unblock the Notifications