Rohit Sharma: ರೋಹಿತ್ ಶರ್ಮಾ - ಮೊಹಮ್ಮದ್ ಶಮಿ ನಡುವೆ ವೈಮನಸ್ಸು?
ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿದೆಯಾ ಎನ್ನುವ ಪ್ರಶ್ನೆ ಶುರುವಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೊಹಮ್ಮದ್ ಶಮಿ ಯಾವಾಗ ಆಡುತ್ತಾರೆ ಎನ್ನುವ ಪ್ರಶ್ನೆಯಿಂದ ಈಗ ಹೊಸ ಸಂಗತಿಗಳು ಬಯಲಾಗುತ್ತಿವೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಶಮಿ ಆಡುತ್ತಿದ್ದರೂ, ಅವರಿಗೆ ಎನ್‌ಸಿಎ ಇನ್ನೂ ಎನ್‌ಒಸಿ ನೀಡಿಲ್ಲದ ಕಾರಣ ಆಸ್ಟ್ರೇಲಿಯಾಗೆ ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಈ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಶುರುವಾಗಿದೆ.
ಅಡಿಲೇಡ್‌ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೋಹಿತ್ ಶರ್ಮಾ ಮೊಹಮ್ಮದ್ ಶಮಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೇ ಇರುವುದೇ ಅನುಮಾನಕ್ಕೆ ಕಾರಣವಾಗಿದೆ.

ಗಾಯಗೊಂಡಿದ್ದ ಶಮಿ ಭಾರತ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ತಮ್ಮ ಫಿಟ್‌ನೆಸ್ ಸಾಬೀತುಪಡಿಸಲು ಮೊಹಮ್ಮದ್ ಶಮಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಮೊಹಮ್ಮದ್ ಶಮಿ, ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿದ್ದಾರೆ.
ಶಮಿ, ರೋಹಿತ್ ವಿರುದ್ಧದ ಹೇಳಿಕೆಗಳು
ಅಡಿಲೇಡ್‌ನಲ್ಲಿ ಭಾರತ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಫಿಟ್‌ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವಾಗ ಅವರ ಮೊಣಕಾಲು ಸ್ವಲ್ಪ ಊತವಾಗಿದೆ. ಅವರು ಬಂದು ಟೆಸ್ಟ್ ಪಂದ್ಯ ಆಡಲು ಇದು ಅಡ್ಡಿಯಾಗಿದೆ. ನಾವು ಶಮಿಯವನ್ನು ಇಲ್ಲಿಗೆ ಅವಸರದಲ್ಲಿ ಕರೆಸಲು ಬಯಸುವುದಿಲ್ಲ, ಶಮಿ ನೋವಿನಲ್ಲಿದ್ದು ಅದರ ಜೊತೆ ಪಂದ್ಯ ಆಡಿದರೆ ಮತ್ತೆ ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಆದರೆ ಅಸಲಿ ವಿಚಾರ ಇದಲ್ಲ ಎನ್ನುವ ಅನುಮಾನವಿದೆ. ನವೆಂಬರ್ ತಿಂಗಳಿನಲ್ಲಿ ಶಮಿ ಎನ್‌ಸಿಎನಲ್ಲಿದ್ದಾರೆ ಎನ್ನುವ ಸುದ್ದಿ ಬರುತ್ತಿದ್ದಂತೆ ಮೊಹಮ್ಮದ್ ಶಮಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು ತಾನು ಫಿಟ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಶಮಿ ಎನ್‌ಸಿಎನಲ್ಲಿದ್ದಾಗ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ರೊಹಿತ್ ಶರ್ಮಾ ಅವರನ್ನು ಭೇಟಿಯಾಗಿದ್ದರು. ಇಬ್ಬರ ಭೇಟಿ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಲಭ್ಯತೆ ಬಗ್ಗೆ ಕೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ಜಾಗರನ್ ವರದಿ ಮಾಡಿದೆ.
ಮೊಹಮ್ಮದ್ ಶಮಿ ಫಿಟ್ ಆಗಿದ್ದು ಭಾರತ ತಂಡಕ್ಕಾಗಿ ಆಡಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಶಮಿ ಆಸ್ಟ್ರೇಲಿಯಾಗೆ ಪ್ರಯಾಣಿಸಬೇಕು ಎಂದರೆ ಎನ್‌ಸಿಎ ಅನುಮತಿ ನೀಡಬೇಕು. ಸದ್ಯ ಶಮಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದರೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ, ಆದಷ್ಟು ಬೇಗ ಅವರು ಆಸ್ಟ್ರೇಲಿಯಾಗೆ ಪ್ರಯಾಣಿಸಿದರೆ 4ನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಇದೆ.












Click it and Unblock the Notifications