RCB: ಅಂಕಪಟ್ಟಿಯಲ್ಲಿ ಆರ್‌ಸಿಬಿ 10ನೇ ಸ್ಥಾನದಲ್ಲಿರುತ್ತದೆ: ಮಾಜಿ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 17 ಆವೃತ್ತಿಗಳಲ್ಲಿ 9 ಬಾರಿ ಸೆಮಿಫೈನಲ್ ಪ್ರವೇಶಿಸಿದ್ದು, 3 ಬಾರಿ ಫೈನಲ್ ಪ್ರವೇಶಿಸಿದೆ. ಆದರೂ ಒಮ್ಮೆಯೂ ಕಪ್ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೂ ಅಭಿಮಾನಿಗಳು ಮಾತ್ರ ಪ್ರತಿ ಬಾರಿ ಅಭೂತಪೂರ್ವ ಬೆಂಬಲ ಕೊಡುತ್ತಲೇ ಬಂದಿದ್ದಾರೆ. ಈ ಬಾರಿಯಾದರೂ ಕಪ್ ಗೆಲ್ಲಲಿ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಆಸ್ಟ್ರೇಲಿಯಾ ಮಾಜಿ ಆಟಗಾರ ಶಾಕ್ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ 18, ಐಪಿಎಲ್ 18ನೇ ಆವೃತ್ತಿ ಎನ್ನುವುದು ಅಭಿಮಾನಿಗಳ ಆಸೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ಈ ಬಾರಿ ತಂಡವು ಸಮತೋಲನದಿಂದ ಕೂಡಿದ್ದು ಎಂದಿಗಿಂತ ಬಲಿಷ್ಠವಾಗಿ ಕಾಣುತ್ತಿದೆ. ಆಸ್ಟ್ರೇಲಿಯಾದ ದಂತಕಥೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ಐಪಿಎಲ್ ವಿಜೇತ ಆಡಮ್ ಗಿಲ್‌ಕ್ರಿಸ್ಟ್ ಆರ್ ಸಿಬಿ ಈ ಬಾರಿ ಕಪ್ ಗೆಲ್ಲುವುದಿರಲಿ, ಪ್ಲೇಆಫ್‌ಗೆ ಕೂಡ ಹೋಗಲ್ಲ ಎಂದಿದ್ದಾರೆ.

ಇನ್ನೂ ವಿಚಿತ್ರ ಎಂದರೆ ಆರ್ ಸಿಬಿ ಈ ಬಾರಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರಲಿದೆ ಎಂದು ಹೇಳಿದ್ದಾರೆ. ಆದರೆ ಅವರು ಇದಕ್ಕೆ ಕೊಟ್ಟಿರುವ ಕಾರಣ ಮಾತ್ರ ವಿಚಿತ್ರವಾಗಿದೆ. "ಆರ್ ಸಿಬಿ ಈ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಬರಬಹುದು ಯಾಕೆಂದರೆ ತಂಡದಲ್ಲಿ ಈ ಬಾರಿ ಹೆಚ್ಚಾಗಿ ಇಂಗ್ಲೆಂಡ್ ಆಟಗಾರರು ಇದ್ದಾರೆ. ಇಂಗ್ಲೆಂಡ್ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಅವರು ಕೊನೆಯ ಸ್ಥಾನ ಪಡೆಯಬಹುದು" ಎಂದು ಕ್ಲಬ್ ಪ್ರೈರಿ ಫೈರ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದಾರೆ.
ಗಿಲ್‌ಕ್ರಿಸ್ಟ್ ಕ್ಲಬ್ ಪ್ರೈರಿ ಫೈರ್ ಪಾಡ್‌ಕ್ಯಾಸ್ಟ್ ಅನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಅವರ ಜೊತೆ ನಡೆಸಿದರು. ಇದು ಮೈಕೆಲ್ ವಾನ್ ಅವರ ಕಾಲೆಳೆಯಲು ಕೂಡ ಹೇಳಿರುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ವಿರುದ್ಧವಾಗಿ ಮಾತನಾಡುತ್ತಿಲ್ಲ, ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ, ಆದರೆ ನೀವು ತಂಡದ ಮ್ಯಾನೇಜ್‌ಮೆಂಟ್ ಅನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.
2009ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕರಾಗಿದ್ದ ಆಡಂ ಗಿಲ್‌ಕ್ರಿಸ್ಟ್ ತಂಡಕ್ಕೆ ಮೊದಲ ಪ್ರಶಸ್ತಿ ತಂದುಕೊಟ್ಟಿದ್ದರು. ಅಂದಿನ ಪಂದ್ಯದಲ್ಲಿ ಆರ್ ಸಿಬಿ ಫೈನಲ್‌ನಲ್ಲಿ ಸೋತು ರನ್ನರ್ಸ್ ಅಪ್ ಆಗಿತ್ತು.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಇಂಗ್ಲೆಂಡ್ ಆಟಗಾರರಾದ ಫಿಲ್ ಸಾಲ್ಟ್ (11.5 ಕೋಟಿ ರೂ.), ಲಿಯಾಮ್ ಲಿವಿಂಗ್‌ಸ್ಟೋನ್ (8.75 ಕೋಟಿ ರೂ.), ಜೇಕಬ್ ಬೆಥೆಲ್ (2.6 ಕೋಟಿ ರೂ.) ಮೇಲೆ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ.
ಮೈಕೆಲ್ ವಾನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಐಪಿಎಲ್ 2025 ರಲ್ಲಿ ಕೊನೆಯ ಸ್ಥಾನದಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು. ತಂಡದಲ್ಲಿ ಗುಣಮಟ್ಟದ ಬ್ಯಾಟರ್ ಗಳ ಕೊರತೆಯಿದ್ದು ತಂಡಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications