Abhishek Sharma: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; ಭಾರತಕ್ಕೆ ಸಿಕ್ಕಿದ್ರು ಭರವಸೆಯ ಬ್ಯಾಟರ್
ಅಭಿಷೇಕ್ ಶರ್ಮಾ, ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಈ ಯುವ ಆಟಗಾರ ಈಗ ಭಾರತ ತಂಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ರನ್ ಗಳಿಸದೇ ಔಟಾಗಿದ್ದ ಅವರು, ಎರಡನೇ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದರು.
ಮೊದಲ ಪಂದ್ಯದಲ್ಲಿ ಸೊನ್ನೆಗೆ ಔಟಾದ ಬಳಿಕ ಎರಡನೇ ಪಂದ್ಯದಲ್ಲಿ ಬಡ್ಡಿ ಸಮೇತ ವಾಪಸ್ ಕೊಟ್ಟ ಅವರು, ಅಮೋಘ ಶತಕ ಸಿಡಿಸಿದರು. ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 46 ಎಸೆತಗಳಲ್ಲಿ 212.77 ಸ್ಟ್ರೈಕ್‌ರೇಟ್‌ನಲ್ಲಿ ಶತಕ ಸಿಡಿಸಿ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ 8 ಸಿಕ್ಸರ್ ಸೇರಿದ್ದವು.

ಅಭಿಷೇಕ್ ಶರ್ಮಾ ಅವರ ಈ ಅಮೋಘ ಶತಕದ ನೆರವಿನಿಂದ ಭಾರತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಜಿಂಬಾಬ್ವೆ 18.4 ಓವರ್ ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಗುವ ಮೂಲಕ 100 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಅಭಿಷೇಕ್ ಶರ್ಮಾ ದಾಖಲೆ
ತಮ್ಮ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. 2024ರಲ್ಲಿ ಟಿ20 ಮಾದರಿಯಲ್ಲಿ 50 ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಅವರ ದಾಖಲೆ ಮುರಿದರು.
ರೋಹಿತ್ ಶರ್ಮಾ 2024ರಲ್ಲಿ ಟಿ20 ಮಾದರಿಯಲ್ಲಿ 46 ಸಿಕ್ಸರ್ ಬಾರಿಸಿದ್ದರೆ, ಅಭಿಷೇಕ್ ಶರ್ಮಾ 50 ಸಿಕ್ಸರ್ ಸಿಡಿಸಿದರು. ವಿರಾಟ್ ಕೊಹ್ಲಿ 45 ಸಿಕ್ಸರ್ ಸಿಡಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಶಿವಂ ದುಬೆ 41 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಶರ್ಮಾ ಸ್ಥಾನ ತುಂಬಲು ಬಂದ ಶರ್ಮಾ!
ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರ ಸ್ಥಾನ ತುಂಬುವ ಆಟಗಾರ ಯಾರು ಎನ್ನುವ ಪ್ರಶ್ನೆಗೆ ಅಭಿಷೇಕ್ ಶರ್ಮಾ ಉತ್ತರವಾಗಿ ಸಿಕ್ಕಿದ್ದಾರೆ. ರೋಹಿತ್ ಕೂಡ ಸ್ಫೋಟಕ ಬ್ಯಾಟರ್ ಆಗಿದ್ದರು, ಅವರ ಬಳಿಕ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಆರಂಭಿಕನಾಗಿ ಬಂದಿದ್ದು ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ.
ಐಪಿಎಲ್ 2024ರಲ್ಲಿ ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾಗಿ ಕಣಕ್ಕಿಳಿದಿದ್ದರು. 16 ಐಪಿಎಲ್ ಪಂದ್ಯಗಳಲ್ಲಿ, ಅವರು 204.22 ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ 484 ರನ್ ಗಳಿಸಿದರು. ಅಲ್ಲಿ ಅವರ ಅದ್ಭುತ ಪ್ರದರ್ಶನ ನೋಡಿ ಭಾರತ ತಂಡದಲ್ಲಿ ಅವಕಾಶ ಸಿಕ್ಕಿತ್ತು.












Click it and Unblock the Notifications