Abhishek Sharma: ರೋಹಿತ್ ದಾಖಲೆ ಉಡೀಸ್; ಅಭಿಷೇಕ್ ಶರ್ಮಾ ಅಬ್ಬರಕ್ಕೆ ಬೆದರಿದ ಇಂಗ್ಲೆಂಡ್
ಮುಂಬೈನಲ್ಲಿ ಭಾರತದ ಬ್ಯಾಟಿಂಗ್ ಪಡೆಯ ಅಬ್ಬರಕ್ಕೆ ಇಂಗ್ಲೆಂಡ್ ಅಕ್ಷರಶಃ ಬೆಚ್ಚಿಬಿದ್ದಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಆಟಕ್ಕೆ ಕ್ರಿಕೆಟ್ ಲೋಕವೇ ಬೆರಗಾಗಿದೆ. ಅಭಿಷೇಕ್ ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರೇ ಫೀಲ್ಡರ್ ಗಳಾಗಿದ್ದರೆ, ಫೀಲ್ಡರ್ ಗಳೇ ಪ್ರೇಕ್ಷಕರಾಗಬೇಕಾಯಿತು. ಸಿಕ್ಸರ್ ಸುರಿಮಳೆಗೈದ ಅಭಿಷೇಕ್ ಶರ್ಮಾ, ಹಿಟ್ ಮ್ಯಾನ್ ರೋಹಿತ್ ಶರ್ಮಾರ ದಾಖಲೆ ಮುರಿಯುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರೂ, ಮತ್ತೊಂದು ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಮೊದಲ ಎಸೆತದಿಂದಲೇ ಇಂಗ್ಲೆಂಡ್ ಬೌಲರ್ ಗಳನ್ನು ದಂಡಿಸಲು ಆರಂಭಿಸಿದರು. ಸಂಜು ಸ್ಯಾಮ್ಸನ್ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದರು. ಬಳಿಕ ಅದನ್ನು ಮುಂದವರೆಸಿದ್ದು ಅಭಿಷೇಕ್ ಶರ್ಮಾ.

ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರೆ ಇನ್ನೊಂದು ತುದಿಯಲ್ಲಿ ಯಾರು ಇದ್ದಾರೆ ಎನ್ನುವುದನ್ನೇ ಪ್ರೇಕ್ಷಕರು ಮರೆತಿದ್ದರು. ಸಂಜು ಸ್ಯಾಮ್ಸನ್ ಉತ್ತಮ ಆರಂಭ ಪಡೆದರೂ 7 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಬಳಿಕ ಬಂದ ತಿಲಕ್ ವರ್ಮಾ 15 ಎಸೆತಗಳಲ್ಲಿ 24 ರನ್ ಗಳಿಸಿದರೂ ಎರಡನೇ ವಿಕೆಟ್‌ಗೆ ಬರೋಬ್ಬರಿ 115 ರನ್‌ಗಳ ಜೊತೆಯಾಟ ಬಂದಿತು.
ಅಭಿಷೇಕ್ ಶರ್ಮಾ ಪ್ರತಿ ಎಸೆತವನ್ನೂ ಬೌಂಡರಿಗೆ ಕಳಿಸಲು ನೋಡುತ್ತಿದ್ದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು, 37 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಬಳಿಕ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 13 ಭರ್ಜರಿ ಸಿಕ್ಸರ್ ಸಹಿತ 135 ರನ್ ಗಳಿಸಿ ಔಟಾದರು.
ಶಿವಂ ದುಬೆ ಕೂಡ 13 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 30 ರನ್ ಗಳಿಸಿದರು. ಬಳಿಕ ಬಂದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ಭಾರತ ದಾಖಲೆಯ ಮೊತ್ತ ಕಲೆ ಹಾಕುವುದನ್ನು ತಪ್ಪಿಸಿಕೊಂಡರೂ, 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಭಾರತ 247 ರನ್ ದೊಡ್ಡ ಮೊತ್ತವನ್ನೇ ಕಲೆಹಾಕಿತು.
ಅಭಿಷೇಕ್ ಶರ್ಮಾ ದಾಖಲೆ
37 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಎರಡನೇ ವೇಗದ ಟಿ20 ಶತಕ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡರು. 35 ಎಸೆತಗಳಲ್ಲಿ ಶತಕ ಗಳಿಸಿರುವ ರೋಹಿತ್ ಶರ್ಮಾ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನಾಗಿದ್ದಾರೆ. ಒಟ್ಟಾರೆ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಇದು 8ನೇ ವೇಗದ ಶತಕವಾಗಿದೆ.
35 ಎಸೆತಗಳಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾಗ 10 ಸಿಕ್ಸರ್ ಸಿಡಿಸಿದರೆ, ಅಭಿಷೇಕ್ ಶರ್ಮಾ 13 ಸಿಕ್ಸರ್ ಸಿಡಿಸುವ ಮೂಲಕ ರೋಹಿತ್‌ರ ದಾಖಲೆಯನ್ನು ಮುರಿದರು.












Click it and Unblock the Notifications