Shivam Dube: ಆರ್‌ಸಿಬಿ ತಂಡದಲ್ಲಿದ್ದಾಗ ಶಿವಂ ದುಬೆ ಯಾಕೆ ಫೇಲಾದ್ರು? ಎಬಿಡಿ ಹೇಳಿದ್ದೇನು?
ಆರ್‌ಸಿಬಿ ತಂಡದಲ್ಲಿದ್ದಾಗ ಉತ್ತಮವಾಗಿ ಪ್ರದರ್ಶನ ನೀಡದ ಹಲವು ಆಟಗಾರರು, ಇತರೆ ತಂಡಗಳಿಗೆ ಹೋದ ಬಳಿಕ ಮ್ಯಾಚ್ ವಿನ್ನರ್ ಆಗಿರುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ಶಿವಂ ದುಬೆ ಅಂತಹ ಆಟಗಾರರಲ್ಲಿ ಒಬ್ಬರು.
ಶಿವಂ ದುಬೆ ಸದ್ಯ ಸಿಎಸ್‌ಕೆ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. 2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಚಾಂಪಿಯನ್ ಆಗಲು ಶಿವಂ ದುಬೆ ಕೂಡ ಪ್ರಮುಖ ಕಾರಣವಾಗಿದ್ದಾರೆ. ಸ್ಪಿನ್ ಬೌಲರ್ ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅವರು, ಮಧ್ಯಮ ಓವರ್ ಗಳಲ್ಲಿ ವೇಗವಾಗಿ ರನ್ ಗಳಿಸುತ್ತಿದ್ದರು. ಈ ಆವೃತ್ತಿಯಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ.

ಶಿವಂ ದುಬೆ ಸಿಎಸ್‌ಕೆ ತಂಡ ಸೇರುವ ಮೊದಲು ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡಿದ್ದಾರೆ. ಆರ್ ಸಿಬಿ ತಂಡದಲ್ಲಿದ್ದಾಗ ಉತ್ತಮ ಪ್ರದರ್ಶನ ನೀಡದ ಅವರು, ಸಿಎಸ್‌ಕೆ ತಂಡಕ್ಕೆ ಸೇರಿದಂತೆ ಯಶಸ್ಸು ಕಂಡಿದ್ದೇಗೆ ಎಂದು ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಎರಡು ವರ್ಷ ಆರ್‌ಸಿಬಿ ಆಟಗಾರ
2019 ಮತ್ತು 2020ರಲ್ಲಿ ಶಿವಂ ದುಬೆ ಆರ್‌ಸಿಬಿ ತಂಡದಲ್ಲಿದ್ದರು. ಎರಡು ಆವೃತ್ತಿಗಳಲ್ಲಿ 15 ಪಂದ್ಯಗಳಲ್ಲಿ ಅವರು 122 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 169 ರನ್ ಗಳಿಸಿದರು. ಬಳಿಕ ಅವರನ್ನು ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತು, 2021ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡರು. 9 ಪಂದ್ಯಗಳಲ್ಲಿ 230 ರನ್ ಗಳಿಸಿದರು ಆದರೆ ಸ್ಟ್ರೈಕ್ ರೇಟ್ 119 ಇದ್ದದ್ದು ಸಮಸ್ಯೆಯಾಗಿತ್ತು. ಬೌಲಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ, ಬಳಿ ರಾಜಸ್ಥಾನ ರಾಯಲ್ಸ್ ಕೂಡ ಅವರನ್ನು ತಂಡದಿಂದ ಬಿಡುಗಡೆ ಮಾಡಿತು.
2022ರ ಮೆಗಾ ಹರಾಜಿನಲ್ಲಿ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರು. ಬಳಿಕ ದುಬೆ ಮ್ಯಾಚ್ ವಿನ್ನರ್ ಆಗಿ ಬದಲಾದರು. 2022ರಲ್ಲಿ 156 ಸ್ಟ್ರೈಕ್ ರೇಟ್‌ನಲ್ಲಿ 289 ರನ್ ಗಳಿಸಿದರು. 2023ರ ಐಪಿಎಲ್‌ನಲ್ಲಿ 158.33 ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 418 ರನ್ ಗಳಿಸುವ ಮೂಲಕ ಸಿಎಸ್‌ಕೆ ಚಾಂಪಿಯನ್ ಆಗಲು ಸಹಾಯ ಮಾಡಿದರು.
ಶಿವಂ ದುಬೆ ಯಶಸ್ಸಿಗೆ ಕಾರಣವೇನು?
ಆರ್‌ಸಿಬಿಯಲ್ಲಿ ದುಬೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಡಿವಿಲಿಯರ್ಸ್ ಅವರ ಯಶಸ್ಸಿಗೆ ಕಾರಣವೇನು ಎಂದು ತಿಳಿಸಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದಾಗ ಶಿವಂ ದುಬೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
"ಶಿವಮ್ ದುವೆ ಅವರನ್ನು ಈ ರೀತಿ ನೋಡುವುದು ಅದ್ಭುತವಾಗಿದೆ. ಅವರು ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ನಿಜವಾಗಿಯೂ ಮುಕ್ತವಾಗಿರಲಿಲ್ಲ. ಅವರು ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ, ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ದಿನದಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಅವರು ಸ್ವಲ್ಪ ಕಲಿತಿದ್ದಾರೆ ಎಂದು ನಾನು ಭಾವಿಸುತ್ತೇನೆ ಅವರು ಸಿಎಸ್‌ಕೆ ತಂಡದಲ್ಲಿ ಮುಕ್ತವಾಗಿರುವ ಬಗ್ಗೆ ಮಾತನಾಡುತ್ತಾರೆ, ಮತ್ತು ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಸ್ಟೀಫನ್ ಫ್ಲೆಮಿಂಗ್ ಮತ್ತು ಹಿಂದಿನ ಎಲ್ಲಾ ವ್ಯಕ್ತಿಗಳು ಅಲ್ಲಿ ಮ್ಯಾಜಿಕ್ ಮಾಡಿದ್ದಾರೆ." ಎಂದು ಡಿವಿಲಿಯರ್ಸ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
ದುಬೆ ಕಳೆದ ವರ್ಷ ಅವರ ಅತ್ಯುತ್ತಮ ಋತುವಿನಲ್ಲಿ 35 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅವರು ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಶಾರ್ಟ್ ಬಾಲ್‌ಗಳ ವಿರುದ್ಧ ಸಮಸ್ಯೆ ಉಳಿಯಿತು. ಬಳಿಕ ಶಾರ್ಟ್ ಬಾಲ್‌ಗಳಿಗೆ ಕೂಡ ಅಭ್ಯಾಸ ಮಾಡಿದರು, ಭಾರತ ಟಿ20 ತಂಡದಲ್ಲಿ ಕೂಡ ಸ್ಥಾನ ಪಡೆದುಕೊಂಡರು.
ಮಂಗಳವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯದಲ್ಲಿ ಶಾರ್ಟ್ ಬಾಲ್‌ಗಳ ವಿರುದ್ಧ ತಮ್ಮ ಬ್ಯಾಟಿಂಗ್ ಸುಧಾರಿಸಿದೆ ಎನ್ನುವದನ್ನು ದುಬೆ ತೋರಿಸಿದರು. 23 ಎಸೆತಗಳಲ್ಲಿ ಐದು ಅತ್ಯುನ್ನತ ಸಿಕ್ಸರ್‌ಗಳೊಂದಿಗೆ 52 ರನ್ ಗಳಿಸಿದರು.
"ಈ ಫ್ರಾಂಚೈಸ್ (CSK) ಎಲ್ಲಕ್ಕಿಂತ ಭಿನ್ನವಾಗಿದೆ. ಅವರು ನನಗೆ ಸ್ವಾತಂತ್ರ್ಯವನ್ನು ನೀಡುತ್ತಿದ್ದಾರೆ. ಅವರು ನಾನು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ ಮತ್ತು ನಾನು ಕೆಲವು ಪಂದ್ಯಗಳನ್ನು ಗೆಲ್ಲಲು ಬಯಸುತ್ತೇನೆ" ಎಂದು 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ನಂತರ ದುಬೆ ಹೇಳಿದ್ದಾರೆ.












Click it and Unblock the Notifications