Paris Olympics: ಕರ್ನಾಟಕದ 9 ಕ್ರೀಡಾಪಟುಗಳಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ
ಬೆಂಗಳೂರು, ಜುಲೈ 21: ಇನ್ನು ಕೆಲವೇ ದಿನಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಲಿದ್ದು, ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಪೈಕಿ ಕರ್ನಾಟಕದ 9 ಮಂದಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. 33ನೇ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಐದು ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರದಿಂದ ಘೋಷಣೆ ಮಾಡುತ್ತಿದ್ದೇನೆ.

ಜುಲೈ 26 ರಿಂದ ಆಗಸ್ಟ್ 11ರ ವರೆಗೆ ಪ್ಯಾರೀಸ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕುಮಾರಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ ನಲ್ಲಿ ಕುಮಾರಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಕುಮಾರಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ ನಲ್ಲಿ ಕುಮಾರಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಅವರ ಮನವಿಗೆ ಸ್ಪಂದಿಸಿ ಈ ಘೋಷಣೆ ಮಾಡಲಾಗಿದೆ. ನಾಡಿನ ಕ್ರೀಡಾಪಟುಗಳು ಸೇರಿದಂತೆ ಭಾರತದ ಎಲ್ಲಾ ಕ್ರೀಡಾಳುಗಳು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅಮೋಘ ಸಾಧನೆಗೈದು ಭಾರತದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದಿದ್ದಾರೆ.
ಇನ್ನು ಮಹಾ ಕ್ರೀಡಾಕೂಟ ಒಲಿಂಪಿಕ್‌ನಲ್ಲಿ ಭಾಗವಹಿಸುವ ಕರ್ನಾಟಕದಿಂದ ದೇಶವನ್ನು ಪ್ರತಿನಿಧಿಸುತ್ತಿರುವ 9 ಸ್ಪರ್ಧಿಗಳಿಗೆ ಪ್ರೋತ್ಸಾಹಧನ ನೀಡಬೇಕೆಂದು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ ಗೋವಿಂದರಾಜು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಡಾ.ಕೆ.ಗೋವಿಂದರಾಜು ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಯೊಬ್ಬ ಸ್ಪರ್ಧಿಗೂ ತಲಾ 5 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡಿದ್ದಾರೆ. ಹೀಗಾಗಿ ಕರ್ನಾಟಕದ ಒಂಬತ್ತು ಕ್ರೀಡಾಪಟುಗಳಿಗೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ನಿಂದ ಪ್ರತ್ಯೇಕ ನೆರವು ದೊರೆಯಲಿದೆ.












Click it and Unblock the Notifications